Monday 2 July 2012

ಬದುಕು ಬಂಡಿ




 ಸ್ವರನ್........ಸ್ವರನ್...
ಮಾ ಕೂಗು ಹಾಕಿದ್ದು ಕೇಳಿಸಿಯೂ ಕೇಳಿಸದವಳಂತೆ ಕೊಟ್ಟಿಗೆಯಲ್ಲಿ ಎಳೆಗರುವಿನ ಚಂದ ನೋಡುವುದರಲ್ಲಿ ಮಗ್ನಳಾಗಿದ್ದಳು ಪುಟ್ಟ ಸ್ವರನ್. ನಸು ಕಂದು ಬಣ್ಣದ ಮೈಯ ಕಡುಕಪ್ಪಿನ ಬಟ್ಟಲುಗಣ್ಣುಗಳ ಪುಟ್ಟ ಕರು ನೆಗೆನೆಗೆದು ತಾಯ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯುತ್ತಿತ್ತು. 'ರಾಣಿ' ಎಂದು ಹೆಸರಿಟ್ಟಿದ್ದಳು ಆ ಕರುವಿಗೆ. ವಾರದ ಕೆಳಗೆ ಬಂದ ಈ ಪುಟ್ಟ ಅತಿಥಿಯು ಸ್ವರನ್ ನ ಅಚ್ಚರಿಯ ಕೇಂದ್ರವಾಗಿಬಿಟ್ಟಿತ್ತು. ರಾಣಿ ತೂಕಡಿಸುವುದು, ಮಲಗುವುದು, ಹಾಲುಕುಡಿಯುವುದು, ಕಿವಿಗೆ ಗಾಳಿ ಹೊಕ್ಕಿದಂತೆ ಓಡುವುದು ಎಲ್ಲವನ್ನೂ ತನ್ನ ಗೆಳತಿಯರಿಗೆ ವರ್ಣಿಸಿ ಹೇಳುವುದು ಖುಶಿ ಅವಳಿಗೆ. ಕೂಗಿ ಕೂಗಿ ಸುಸ್ತಾದ ಮಾ ಎಲ್ಲ ಕಡೆ ಹುಡುಕಿ ಕೊಟ್ಟಿಗೆಯಲ್ಲಿ ರಾಣಿಯ ಮೈ ಸವರುತ್ತಾ ನಿಂತ ಮಗಳನ್ನು 'ಸ್ವರನ್ ಆಗಲೇ ಗಂಟೆ ಎಂಟು. ಶಾಲೆಗೆ ಹೊತ್ತಾಯಿತು. ಬೇಗ ಜಡೆ ಹಾಕಿ ರೋಟಿ ನಿನ್ನ ಇಷ್ಟದ ಸಾಗ್ ಜತೆ  ತಿನ್ನುವಿಯಂತೆ' ಎಂದು ಎತ್ತಿಕೊಂಡೇ ನಡೆದಳು. ಸ್ವರನ್ ಗೆ ಶಾಲೆ ಅಂದರೆ ಬೇಜಾರು. ಪುಸ್ತಕಗಳನ್ನು ನೋಡಿದರೇ ನಿದ್ದೆ ಒತ್ತಿಕೊಂಡು ಬರುತ್ತಿತ್ತು. ಮಾ ಸ್ವರನ್ ನ್ನು ಶಾಲೆಗೆ ಬಿಡಲು ಹೋಗುತ್ತಿದ್ದಳು. ಮರಳಿ ಬರುತ್ತಾ ಹೊಲದಿಂದ ದನಕರುಗಳ ಮೇವಿಗೆ ಬೇಕಾದ ಹುಲ್ಲು ತರಿದುಕೊಂಡು ಬರುತ್ತಿದ್ದಳು. ಕೆಲವೊಂದು ಸಲ ಸ್ವರನ್ ಗೆ ಶಾಲೆ ಎಷ್ಟು ಬೇಜಾರು ಹಿಡಿಸುತ್ತಿತ್ತೆಂದರೆ ಮಾ ತಿರುಗಿ ಮನೆಗೆ ಮುಟ್ಟುವ ಮುಂಚೆಯೇ ಇನ್ನೊಂದು ಗಲ್ಲಿಯಿಂದ ಮನೆ ಸೇರುತ್ತಿದ್ದಳು.  ದಾದಿ ಕೊಟ್ಟ ಕಡಾಪ್ರಶಾದ್ ಮೆಲ್ಲುತ್ತಾ ಮಾ ಬರುವವರೆಗೆ ದಾದಿಯ ಹಿಂದೆ ಮುಂದೆ ಓಡಾಡುತ್ತ ಶಾಲೆ ತಪ್ಪಿಸಿದ್ದಕ್ಕೆ ಮಾ ಸಿಟ್ಟಾದರೆ ತನ್ನನ್ನು ಬಚಾವ್ ಮಾಡುವಂತೆ ದಾದಿಯನ್ನು ಪುಸಲಾಯಿಸುತ್ತಿದ್ದಳು. ದಾದಿ ತನ್ನ ಮುದ್ದಿನ ಮೊಮ್ಮಗಳ ಮಾತಿಗೆ ಇಲ್ಲ ಹೇಳುವುದುಂಟೆ? ಮಾ ಕೂಡಾ ಅಷ್ಟೆ ಒಂದೆರಡು ಸಲ ಗದರಿ ಹಣೆಯಲ್ಲಿ ಬರೆದಂತಾಗುತ್ತದೆ ಎಂದು ಸುಮ್ಮನಾಗುತ್ತಿದ್ದಳು. ಹೆಣ್ಣುಹುಡುಗಿ ಏನೋ ಓದಲು ಬರೆಯಲು ಬಂದರಷ್ಟೆ ಸಾಕು ಎಂಬ ಮನೋಭಾವ ಮನೆಯವರದು. ಅದಕ್ಕೆ ತಕ್ಕಂತೆ ಹಾಗೂ ಹೀಗೂ ಐದನೆ ಈಯತ್ತೆವರೆಗೆ ಬಂದು ಓದಿಗೆ ಶರಣು ಹೊಡೆದಳು ಸ್ವರನ್. ಅಮ್ಮ ಅಜ್ಜಿಯರ ಹಿಂದೆ ಮುಂದೆ ಸುತ್ತಾಡುತ್ತ ಎಲ್ಲ  ಬಗೆಯ ಮನೆಕೆಲಸಗಳಲ್ಲಿ  ಪರಿಣಿತಳಾದಳು. 
ಹದಿನೇಳರ ಹರೆಯದಲ್ಲಿ ಪಕ್ಕದ ಮರೂಲೆ ಗ್ರಾಮದ ಜತಿಂದರ್ ಜೊತೆ ಮದುವೆಯೂ ನಡೆದು ಹೋಯಿತು. ಮೈ ಕೈ ತುಂಬಿಕೊಂಡು ಸುಂದರವಾಗಿದ್ದ ಸ್ವರನ್ ಗೆ ಬಿಳಿಚಿಕೊಂಡಿದ್ದ ಕೃಶಕಾಯನಾದ ಜತಿಂದರ್ ಯಾವ ರೀತಿಯಲ್ಲೂ ಅನುರೂಪನಿದ್ದಿರಲಿಲ್ಲ. ಹೇರಳವಾಗಿದ್ದ ಹೊಲಗದ್ದೆಗಳು ಎಲ್ಲ ಕುಂದುಗಳನ್ನು ಮುಚ್ಚಿ ಹಾಕಿತ್ತು. ಹೊಸವಾತಾವರಣಕ್ಕೆ ಬೇಗ ಹೊಂದಿಕೊಂಡಳು ಸ್ವರನ್. ಕೂಡುಕುಟುಂಬ ಅವರದ್ದು. ಜತಿಂದರ್ ಮತ್ತೆ ಸತಿಂದರ್ ಇಬ್ಬರೇ ಗಂಡುಮಕ್ಕಳಾದರೂ ಮನೆ ತುಂಬಾ ಜನರಿದ್ದರು. ತಾಯಾಜಿ ಚಾಚಾಜಿ ಎಲ್ಲರ ಪರಿವಾರಗಳೂ ಜೊತೆಗಿದ್ದವು. ಕೈ ತುಂಬಾ ಕೆಲಸವಿತ್ತು. ಬೆಳಿಗ್ಗೆ ಅಮ್ತತವೇಳೆಗೆ ಎದ್ದು ಜಪ್ ಜಿಸಾಹಿಬ್ ನ ಪಾಠ ಪಠಣ ಮಾಡುತ್ತ ಕಟ್ಟಿದ್ದ ಎಮ್ಮೆಗಳ ಹಾಲು ಕರೆದು ಮೈ ತೊಳೆದು ಕೊಟ್ಟಿಗೆ ಶುಚಿಗೊಳಿಸಿ ಅಡಿಗೆಮನೆಗೆ ಬರುತ್ತಿದ್ದಳು. ಬೆಳಗಿನ ಚಾ ತಿಂಡಿ ಮುಗಿಸಿ  ಗಂಡಸರು ಹೊಲಕ್ಕೆ ಹೊರಟರೆ ಹೆಂಗಸರು ಬಿಸಿಲೇರುವಷ್ಟರಲ್ಲಿ       ಮಧ್ಯಾಹ್ನದ  ಅಡುಗೆ ಮುಗಿಸಿ ತಲೆ ಮೇಲೆ ಹೊರೆ ಹೊತ್ತುಕೊಂಡು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗಂಡಸರಿಗೆ ತಂದುಕೊಡುತ್ತಿದ್ದರು. ಮಧ್ಯಾಹ್ನ ಕೂಡಾ ಅರೆ ಗಳಿಗೆ ಕಣ್ಣು ಮುಚ್ಚುವಷ್ಟು ಪುರುಸೊತ್ತಿಲ್ಲ ಸ್ವರನ್ ಗೆ. ಮತ್ತೆ ಸಂಜೆ ಚಾ ರಾತ್ರೆ ಅಡುಗೆಯ ತಯಾರಿ. ಬೇಸಗೆಯಲ್ಲಿ ಎಲ್ಲರೂ ಹೊರಗೆ ಅಂಗಳದಲ್ಲಿ ಚಾರ್ ಪಾಯಿ ಹಾಕಿಕೊಂಡು ಮಲಗುವುದು ರೂಢಿ. ದಣಿದಿದ್ದ ಸ್ವರನ್ ಗೆ ಹಾಸಿಗೆಯಲ್ಲಿ ಮೈ ಚೆಲ್ಲಿದ ಕೂಡಲೇ ಸೊಂಪಾದ ನಿದ್ರೆ ಬರುತ್ತಿತ್ತು. ಜತಿಂದರ್ ನ ಆರೋಗ್ಯ ಅಷ್ಟಾಗಿ ಸರಿಯಿರುತ್ತಿರಲಿಲ್ಲ. ಚಳಿಗಾಲ ಬಂದರಂತೂ  ಇನ್ನೂ ಬಿಗಡಾಯಿಸುತ್ತಿತ್ತು. ಮದುವೆಯಾಗಿ ಎರಡು ವಸಂತಗಳು ಕಳೆದು ಹೋಗಿರಬೇಕು. ಈ ನಡುವೆ ಜತಿಂದರ್ ನ ಕಾಯಿಲೆ ಉಲ್ಬಣಗೊಂಡು ಆಸ್ಪತ್ರೆ ಸೇರಿದ.ಹೃದಯದಲ್ಲಿ ತೂತಿದೆ ಬದುಕುವುದು ಕಷ್ಟ ಎಂದರು ಡಾಕ್ಟರು. ಅಂತೆಯೇ ಒಂದು ರಾತ್ರಿ ಸ್ವರನ್ ಳನ್ನು ವಿಧವೆಯಾಗಿಸಿ ಹೊರಟ ಜತಿಂದರ್.
ಸ್ವರನ್ ಳ ಗೋಳು ಕೇಳುವಂತಿರಲಿಲ್ಲ. ಅಂತಿಮಕ್ರಿಯೆಗೆ ಬಂದ ನೆಂಟರಿಷ್ಟರೆಲ್ಲ ಪಾಪ ಒಂದು ಮಗುವಾದರೂ ಇದ್ದಿದ್ದರೆ ಹೇಗೋ ನಡೆಯುತ್ತಿತ್ತು  ಎಂದು ಮರುಕ ವ್ಯಕ್ತಪದಿಸುವವರೇ. ಸ್ವರನ್ ಳ ಅತ್ತೆ ಮಾವಂದಿರು ಅಂತಕರಣವುಳ್ಳವರು. ಎಲ್ಲರೊಡನೆ ಹೊಂದಿಕೊಂಡು ಹೋಗುತ್ತಿದ್ದ, ಮನೆಕೆಲಸವನ್ನೆಲ್ಲ ಕೊಂಕಿಲ್ಲದೆ ನಿಭಾಯಿಸುತ್ತಿದ್ದ, ರೋಗಿ ಗಂಡನ ಸೇವೆಯನ್ನೂ ಮಾಡುತ್ತಿದ್ದ ಸೊಸೆಯ ಮೇಲೆ ಅಕ್ಕರೆ ಅವರಿಗೆ. 
ತಮ್ಮ ಹರೆಯದ ಮಗನ ಸಾವಿನ ದುಖವನ್ನು ಭರಿಸಿಕೊಂಡು ಸೊಸೆಗೆ ಬೆಂಗಾವಲಾಗಿ ನಿಂತರು.  ಸ್ವರನ್ ಳನ್ನು ತವರಿಗೂ ಹೋಗಲು ಬಿಡಲಿಲ್ಲ. ಸ್ವರನ್  ಮತ್ತೆ ತನ್ನ  ಕೆಲಸಗಳಲ್ಲಿ ಮುಳುಗಿಹೋದಳು. ಕೆಲವೊಮ್ಮೆ ಕೈ ತಡೆಯುತ್ತಿತ್ತು. ಮನಸ್ಸು ಮಾರು ದೂರ ಓಡುತ್ತಿತ್ತು. ಮುಂದೆ ಏನು ಎಂಬ ಪ್ರಶ್ನೆ  ಬೃಹದಾಕಾರವಾಗಿ ಕಾಡುತ್ತಿತ್ತು. ಅತ್ತೆ ಮಾವ ಆದರಿಸಿದ ಹಾಗೆ ಅವರ ನಂತರ ನನ್ನನ್ನು ಕೇಳುವರಾರು? ಜತಿಂದರ್ ಇದ್ದರೆ.... ಅಲ್ಲಿಗೆ ಯೋಚನೆ ಕಡಿಯುತ್ತಿತ್ತು. ಕಣ್ಣೀರು ಹರಿಯುತ್ತಿತ್ತು.
ಈ ಪ್ರಶ್ನೆ ಸ್ವರನ್ ಳ ಅತ್ತೆ ಮಾವಂದಿರನ್ನು ಕೂಡಾ ಬಹಳವಾಗಿ ಕಾಡುತ್ತಿತ್ತು.ತಮ್ಮ ನಂತರ ಮುಂದೇನು? ಸ್ವರನ್ ಳ ತವರಿನವರೂ ಅಷ್ಟೇನೂ ಸ್ಥಿತಿವಂತರಲ್ಲ. ಅಣ್ಣ ತಮ್ಮಂದಿರು ಎಷ್ಟು ಕಾಲ ಸಾಕಿಯಾರು? ಅದಲ್ಲದೆ ಸ್ವರನ್ ಗಿನ್ನೂ ಇಪ್ಪತ್ತರ ಹರೆಯ. ಇಷ್ಟರಲ್ಲೇ ಆಕೆಯ ಬದುಕು   ಮುಗಿದುಹೋಯಿತೇ? ಆಕೆ ಕಂಡ  ಹೊಂಗನಸುಗಳೆಲ್ಲಾ ಚದುರಿಹೋದವೇ? ವಿಧವೆಯನ್ನು ಮದುವೆಯಾಗಲು ಯಾರು ಮುಂದೆ ಬರುತ್ತಾರೆ?  ಈ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ಬಂದವ ಸತಿಂದರ್. ಜತಿಂದರ್ ನ ತಮ್ಮ. ತಮಗೆ  ಹೊಳೆದ ಪರಿಹಾರವನ್ನು ಅತ್ತೆ ಮಾವನಿಗೆ ಸೂಚಿಸಿದರು. ಸತಿಂದರ್ ನ ಜೊತೆ ಸ್ವರನ್ ಳ ಮರುಮದುವೆಮಾಡಿಸಿದರೆ ಹೇಗೆ? ಸತಿಂದರ್ ಅಣ್ಣನ ಹಾಗೆ ಕೃಶಕಾಯನಲ್ಲ. ಗರಡಿಯಲ್ಲಿ ಪಳಗಿದ ಆರೋಗ್ಯವಂತ ದೇಹ. ಮನಸ್ಸು ಮಗುವಿನ ಹಾಗೆ. ತಮ್ಮ ಮಾತಿಗೆ ಎದುರಾಡುವವನಲ್ಲ. ಈ ಪರಿಹಾರ ಸೂಚ್ಯವಾಗಿ ಕಂಡಿತು ವೃದ್ಧರಿಬ್ಬರಿಗೂ. ಸ್ವರನ್ ಳ ತಂದೆ ತಾಯಂದಿರನ್ನೂ ಕರೆಸಿ ಈ ವಿಷಯ ಅವರ ಮುಂದಿಟ್ಟರು. ಆ ಹಿರಿಯರಿಗೂ ಸಂತಸದಿಂದ ಮಾತೇ ಹೊರಡಲಿಲ್ಲ. 'ಸ್ವರನ್ ನಮ್ಮ ಮಗಳಲ್ಲ. ನಿಮ್ಮ ಮಗಳೇ. ನೀವು ಏನು ನಿಶ್ಚಯಿಸಿದರೂ ಅದು ಸರಿ' ಎಂದು ತಮ್ಮ ಒಪ್ಪಿಗೆ ಸೂಚಿಸಿದರು. ಸ್ವರನ್ ಳಿಗೆ ತಿಳಿದಾಗ ಏನು   ಹೇಳಬೇಕೆಂದೇ ತೋಚಲಿಲ್ಲ. ನೀವು ಹೇಗೆ ಹೇಳಿದರೆ ಹಾಗೆ ಅಂತ ತಲೆ ಅಲ್ಲಾಡಿಸಿದಳಷ್ತೆ. ಆದರೆ ಸತಿಂದರ್ ಗೆ ಮಾತ್ರ ಸಿಡಿಲು ಹೊಡೆದಂತಾಗಿತ್ತು. 'ಭಾಭಿ! ತನ್ನ ಪ್ರೀತಿಯ ಭಾಭಿಯ ಜೊತೆ ತನ್ನ ಮದುವೆ? ಮನಸ್ಸು ಸಂಬಂಧಗಳ ಈ ಬದಲಾವಣೆಯನ್ನು ಒಪ್ಪದಾಗಿತ್ತು. ಆದರೆ ಮಾ ಕಣ್ಣೀರುಗರೆದು ಹೇಳಿದ್ದರು ಇದೊಂದೇ ದಾರಿ ಭಾಭಿಯನ್ನು ಈ ಮನೆಯಲ್ಲಿ ಉಳಿಸಲು. ಭಾಭಿಯ ಮೊಗದಲ್ಲಿ ಮತ್ತೆ ನಗೆ ಮೂಡಿಸಲು. ಭಾಭಿ ತನಗೂ ಮೆಚ್ಚುಗೆಯೇ. ಆದರೆ ಭಾಭಿಯಾಗಿ. ತನ್ನ ಪ್ರೀತಿಯ ಅಣ್ಣನಿಗೆ ದ್ರೋಹ ಬಗೆದಂತಾಗುದಿಲ್ಲವೇ ಎಂದು ಹಗಲು ರಾತ್ರಿ ಪರಿತಪಿಸಿದ. ಭಾವನೆಗಳಲ್ಲಿ ಹೊಯ್ದಾಡಿ  ಕೊನೆಗೆ ಅರೆಮನಸ್ಸಿನಿಂದಲೆ ವಿವಾಹಕ್ಕೆ ತನ್ನ ಸಮ್ಮತಿ ಸೂಚಿಸಿದ.
ಸ್ವರನ್ ಳ ಎರಡನೆಯ ಮದುವೆ ಹೆಚ್ಚು ಗದ್ದಲವಿಲ್ಲದೆ ನಡೆದುಹೋಯಿತು. ತಂದೆ ತಾಯಿ ಅಣ್ಣ ತಮ್ಮಂದಿರೆಲ್ಲ ಬಂದು ಶುಭ ಹಾರೈಸಿದರು. ಅಲ್ಲಿಗೆ ಶುರುವಾಯಿತು ಸ್ವರನ್ ಳ ಬದುಕಿನಲ್ಲಿ ಎರಡನೆಯ ಅಧ್ಯಾಯ. ಮದುಮಕ್ಕಳ ಹುಡುಗಾಟ, ಹೊಸತನವೆಲ್ಲ ಈ ಸಾವು-ಮದುವೆಗಳ ನಡುವೆ ಎಲ್ಲೋ  ಕಳೆದುಹೋಗಿತ್ತು. ಸಮಯ ಕಳೆದಂತೆ ಮೆಲ್ಲಮೆಲ್ಲನೆ ಮತ್ತೆ ಸ್ವರನ್ ಳ ಮುಖದಲ್ಲಿ ಮಂದಹಾಸ ಮೂಡಲಾರಂಭಿಸಿತು. ತಾಯಿಯಾಗುವ ಲಕ್ಷಣಗಳು ಕಾಣಿಸಿದಂತೆ ಮುಖದಲ್ಲಿ ಕೆಂಪು ತುಂಬತೊಡಗಿತು. ಅತ್ತೆ ಮಾವಂದಿರ ಖುಶಿ ಹೇಳತೀರದು. ಅವಳ ತವರಿಗೂ ಕಳಿಸದೆ ತಮ್ಮಲ್ಲಿಯೇ ಇರಿಸಿಕೊಂಡು ಆರೈಕೆ ಮಾಡಿದರು. ನವಮಾಸಗಳು ಕಳೆದು ಆರೋಗ್ಯವಂತ ಸುಂದರ ಶಿಶುವಿಗೆ ಜನ್ಮವಿತ್ತಳು. ವೃದ್ಧರು ತಮ್ಮ ಜತಿಂದರ್ ನೇ ಬಂದ ಎಂದು ಸಂತಸಪಟ್ಟರು. ಅಂತೆಯೇ ಜತಿಂದರ್ ಎಂದೇ ಹೆಸರಿಟ್ಟರು ಆ ಮಗುವಿಗೆ. ಆ ಮನೆಯಲ್ಲಿ ಮತ್ತೆ ಹರ್ಷದ ಹೊನಲು ಹರಿಯಿತು. ಪುಟ್ಟ ಜತಿಂದರ್ ನ ಅಳು, ನಗು, ಕೇಕೆಯಿಂದ ತುಂಬಿಹೋಯಿತು. ಎಲ್ಲರೂ ಸಂತಸದಿಂದಿದ್ದರೆ ಸತಿಂದರ್ ಮಾತ್ರ ಕೆಲಸಮಯ ತುಂಬಾ ಉದ್ವಿಗ್ನನಾಗುತ್ತಿದ್ದ. ಮಲಗಿ ನಿದ್ದೆ ಮಾಡಿದರೆ ಅಣ್ಣ ಕನಸ್ಸಿನಲ್ಲಿ ಬಂದು 'ನೀನು ದ್ರೋಹಿ' ಎಂದು ಜರಿದಂತಾಗುತ್ತಿತ್ತು. ಪುಟ್ಟಜತಿಂದರ್ ನ   ಜನನದ ನಂತರವಂತೂ  ಅಣ್ಣ ಎಲ್ಲೆಡೆ ಕಾಣಿಸಲಾರಂಭಿಸಿದ್ದ. ತಾನು ಅಣ್ಣನ ಪಾಲಿನ ಖುಷಿಯನ್ನು ಅನುಭವಿಸುತ್ತಿದ್ದೇನೆ. ಸ್ವರನ್, ಮಗು ಎಲ್ಲ ಅಣ್ಣನಿಗೆ ಸೇರಬೇಕಾದದ್ದು. ತಾನು ಹಕ್ಕುದಾರನಲ್ಲ ಎಂದು ಯೋಚಿಸಿ ಭ್ರಮಿಸಿ ಮನೋರೋಗಿಯಾಗಿ ಹೋದ. ಅಪ್ಪಿ ತಪ್ಪಿಯೂ ಮಗುವಿನ ಹತ್ತಿರ  ಸುಳಿಯುತ್ತಿರಲಿಲ್ಲ. ಮಗು ಪಾಪಾ ಪಾಪಾ ಎಂದು ಅಂಬೆಗಾಲಿಡುತ್ತಾ ಕಾಲಿಗೆ ತೊಡರಿಕೊಂಡರೆ ಕೈ ಎತ್ತಿಕೊಳ್ಳಲು ಹೋಗಿ ಹಾಗೆ ಹಿಂದೆ ಸರಿಯುತ್ತಿತ್ತು. ನಿರ್ಲಕ್ಶ್ಯದಿಂದ ನಡೆದುಬಿಡುತ್ತಿದ್ದ.  
ಹೀಗೆಯೇ ಸಮಯ ಸರಿದು ಪುಟ್ಟ ಜತಿಂದರ್ ಗೆ ಐದು ವರ್ಷ ತುಂಬಿ ಶಾಲೆಗೆ ಸೇರಿಸಿದ್ದರು. ಚುರುಕಾಗಿದ್ದ ಹುಡುಗ ಹೇಳಿಕೊಟ್ಟದನ್ನು ಬೇಗನೆ ಕಲಿಯುತ್ತಿದ್ದ. ದಾದಿ ಕಲಿಸಿದ್ದ ಜಪ್ ಜಿ ಸಾಹಿಬ್ ನ ಮೂಲಮಂತ್ರವನ್ನು ರಾಗವಾಗಿ ಹೇಳುತ್ತಿದ್ದ. ಒಮ್ಮೆ ನೆಂಟರ ಮನೆಗೆ ಮದುವೆಗೆಂದು ಇಡೀ  ಪರಿವಾರ ಪಕ್ಕದ   ಹಳ್ಳಿಗೆ ಹೋಗಬೇಕಾಗಿ ಬಂತು. ಸತಿಂದರ್ ಒಬ್ಬನೇ ಮನೆಯಲ್ಲುಳಿದಿದ್ದ.  ಸ್ವರನ್ ಗೆ ಮದುವೆಗಳೆಂದರೆ ವಿಶೇಷ ಆಸಕ್ತಿ. ಕೈಗೆ ಮೆಹಂದಿ ಹಚ್ಚುವುದು, ರಾತ್ರಿ ಜಾಗೊ ಹೊರಡಿಸುವುದು, ಮಣ್ಣಿನ ಮಡಕೆಗಳ ಮೇಲೆ ದೀಪಗಳನ್ನಿಟ್ಟುಕೊಂಡು ಮಡಕೆಯನ್ನು  ತಲೆಯ ಮೇಲೇರಿಸಿಕೊಂಡು ನ್ರತ್ಯ ಮಾಡುವುದರಲ್ಲಿ ಪರಿಣಿತಳಾಗಿದ್ದಳು. ಮದುವೆಯ ಪದಗಳನ್ನು  ಹಾಡುವುದರಲ್ಲಂತೂ ಆಕೆಯದು ಎತ್ತಿದ ಕೈ. ಯಾವಾಗಲೂ ಈ ಕಾರ್ಯಕ್ರಮಗಳನ್ನು ಮನದಣಿಯೆ ಆಸ್ವಾದಿಸುತ್ತಿದ್ದ ಸ್ವರನ್ ಇಂದೇಕೋ ಮೌನಿಯಾಗಿದ್ದಳು.ಎದೆಯಲ್ಲೇನೋ ನೋವು.  ಸತಿಂದರ್ ಈಗೀಗ ತುಂಬಾ ಕೋಪಗೊಳ್ಳುತ್ತಿದ್ದ. ಒಬ್ಬನಿರಬೇಕಾದರೆ ತನ್ನಲೇ ಎನೋ  ಗುಣುಗುಣಿಸುತ್ತಿದ್ದ. ಇಂತಹ ಮನಸ್ಥಿತಿಯಲ್ಲಿ ಆತನನ್ನು ಮನೆಯಲ್ಲಿ ಒಂಟಿಯಾಗಿ ಬಿಡುವ ಮನಸ್ಶಿರಲಿಲ್ಲ. ಮದುವೆ ಹುಡುಗಿ ರಮನ್ ತಾನು ಸ್ವರನ್ ಭಾಭಿಯಿಂದ ಮಾತ್ರ ಮೆಹಂದಿ ಹಚ್ಚಿಸಿಕೊೞುವುದು  ಎಂದು   ಒತ್ತಾಯ ಮಾಡಿದ್ದರಿಂದ ಬಂದಿದ್ದಳಷ್ಟೆ. ಮೆಹಂದಿ ಕಾರ್ಯಕ್ರಮ ಮುಗಿದ ಕೂಡಲೆ ಪಕ್ಕದ ಮನೆಯ ಸಂತೊಖ್ ನ ಜತೆ ಮಾಡಿ ಮನೆಗೆ ಹೊರಟಳು. ಸರಿರಾತ್ರಿಯಲ್ಲಿ ಮನೆ ಮುಟ್ಟಿ ನೋಡುವುದೇನು?  ಸತಿಂದರ್ ಹಜಾರದ ತೊಲೆಗೆ ನೇಣು ಹಾಕಿಕೊಂಡಿದ್ದ.  ಗೋಡೆಯ ಮೇಲೆ ಜತಿಂದರ್ ನ ಭಾವಚಿತ್ರ ಹಾರ ಹಾಕಿಸಿಕೊಂಡು ನಗುತ್ತಿತ್ತು. ಪುನಃ ಅವಳ ಬದುಕಿನಲ್ಲಿ  ಬಿರುಗಾಳಿ ಬೀಸಿತ್ತು. ವಿಧಿ ಅಟ್ಟಹಾಸದಿಂದ ನಕ್ಕಿತ್ತು. ಬಿಟ್ಟ ಕಣ್ಣು ಬಿಟ್ಟ ಹಾಗೆ ಎಷ್ತು ಹೊತ್ತು ಕೂತಿದ್ದಳೋ. ಸುದ್ದಿ ಮದುವೆ ಮನೆಗೆ ಮುಟ್ಟಿ ಎಲ್ಲರೂ ಇತ್ತ ದೌಡಾಯಿಸಿ ಬಂದರು.  ಮಾಡುವುದಕ್ಕೇನೂ  ಉಳಿದಿರಲಿಲ್ಲ. ಸತಿಂದರ್ ಅಣ್ಣನ ಹಾದಿ ಹಿಡಿದು ನಡೆದಿದ್ದ. ಸ್ವರನ್ ಮತ್ತೆ ವಿಧವೆಯಾಗಿದ್ದಳು.  
ಈ ಸಲ ಅವಳಿಗಾಗಿ ಯಾರೂ ಮರುಗುವವರು ಇರಲಿಲ್ಲ. ಅವಳ ಅತ್ತೆ ಮಾವ ಕೂಡ ಎಲ್ಲ್ರರಂತೆ ಅವಳ ದುರಾದೃಷ್ಟವನ್ನೇ ಹೊಣೆ ಮಾಡಿದರು. ಇಬ್ಬರು ಹರೆಯದ ಗಂಡು ಮಕ್ಕಳನ್ನು ತಮ್ಮ ಕಣ್ಣೆದುರಿಗೆ ಕಳೆದುಕೊಂಡ ದುಖದಲ್ಲಿ ಸರಿ ತಪ್ಪುಗಳ ವಿವೇಕವನ್ನು ಮರೆತುಬಿಟ್ಟಿದ್ದರು. ಕುಟುಂಬದ  ಹಿರಿಯರು ಸೇರಿ ಇಂತಾ ದುರಾದೃಷ್ಟದ ಹೆಣ್ಣು ಈ ಮನೆಯಲ್ಲಿ ಇರಬಾರದು. ಸ್ವರನ್ ಳಿಗೆ ಊರ ಹೊರಗಿಬನ ಪುಟ್ಟ ಜಮೀನು ಮತ್ತೆ ಅದರಲ್ಲೇ ಇರುವ ಮನೆ ಕೊಡುವುದೆಂದು ನಿಶ್ಚಯಿಸಿದರು. ಸ್ವರನ್ ಳ ತಾಯಿ ತೀರಿಹೋಗಿದ್ದರಿಂದ ಆ ಮನೆಯಲ್ಲಿ ತನ್ನ ತಂದೆ ಹಾಗೂ ಪುಟ್ಟ ಜತಿಂದರ್  ಇರುವುದೆಂದು ನಿರ್ಧಾರವಾಯಿತು. ಅಲ್ಲಿಗೆ ಅವಳ ಬಾಳಿನ  ಮತ್ತೊಂದು ಅಧ್ಯಾಯ ಶುರುವಾಯಿತು. ಮೂರು ಜೀವಗಳ ಹೊಟ್ಟೆ ಹೊರೆಯಲು ತನ್ನ ಹೊಲದ ಕೆಲಸದ ಜೊತೆಗೆ ಪಕ್ಕದವರ ಹೊಲಗಳಿಗೂ ಹೋಗಬೇಕಾಗಿ ಬಂತು. ಸ್ವರನ್ ಎದೆಗುಂದಲಿಲ್ಲ. ಜತಿಂದರ್ ಹಳ್ಳಿಯ ಶಾಲೆಗೆ  ಹೋಗುತ್ತಿದ್ದ. ಬಹಳಷ್ಟು ಸಲ ತಾಯಿ ಮಗ ಹಳ್ಳಿಯ ಗುರುದ್ವಾರದಲ್ಲಿ ರೋಟಿ  ತಯಾರಿಸುವ ಸೇವೆ ಮಾಡಿ ಅಲ್ಲಿಯೇ 'ಗುರು ಕಾ ಲಂಗರ್' ಸ್ವೀಕರಿಸುತ್ತಿದ್ದರು. ಇತ್ತ ಸೊಸೆ ಮೊಮ್ಮಗನನ್ನು ಮನೆಯಿಂದ ಹೊರಹಾಕಿದ ಮೇಲೆ ಅವಳ ಅತ್ತೆ ಮಾವಂದಿರೂ ಸುಖವಾಗಿರಲಿಲ್ಲ. ತಾಯಾಜಿ, ಚಾಚಾಜಿ ಮತ್ತು ಕೆಲವರು ಇವರ ಪಾಲಿನ ಆಸ್ತಿಯನ್ನು ಕಬಳಿಸಲು ಕುತಂತ್ರ ಹೂಡಿ ಯಶಸ್ವಿಯಾದರು. ಮನೆ ಜಮೀನೆಲ್ಲವನ್ನು ತಮ್ಮ ಹೆಸರಿಗೆ ಬರೆಸಿಕೊಂಡು, ಮಕ್ಕಳ ಅಕಾಲಿಕ ಮರಣದಿಂದ ಮೊದಲೇ ಜರ್ಜರಿತವಾಗಿದ್ದ ಮುದಿದಂಪತಿಗಳನ್ನು ಮನೆಯಿಂದ ಹೊರಗಟ್ಟಿದರು. ಎಲ್ಲೂ ಆಶ್ರಯವಿಲ್ಲದೆ ತಲೆ ಮೇಲೆ ಸೂರಿಲ್ಲದೆ ಅಸಹಾಯಕರಾಗಿ ವೃದ್ಧರು ಹಳ್ಳಿಯ ಗುರುದ್ವಾರದ ಚಾವಡಿಯನ್ನು ಆಶ್ರಯಿಸಿದರು. ಸ್ವರನ್ ಳಿಗೆ ಸುದ್ದಿ ತಿಳಿದಾಗ ಮನನೊಂದು ಅತ್ತೆ ಮಾವನನ್ನು ಮನೆಗೆ ಕರೆದುಕೊಂಡು ಹೋಗಲು ಮಗನನ್ನು ಜತೆ ಮಾಡಿಕೊಂಡು ಬಂದಳು. ಸೊಸೆ ಮತ್ತು ಪ್ರೀತಿಯ ಮೊಮ್ಮಗನನ್ನು ನೋಡುತ್ತಲೇ ವೃದ್ಧರ ಶೋಕವೆಲ್ಲ ಮಡುಗಟ್ಟಿ ಕಣ್ಣೀರಾಗಿ ಹರಿಯಿತು. ಜತಿಂದರ್ ತನ್ನ ಪ್ರೀತಿಯ ದಾದಾ ದಾದಿಯ ಕೈಯೇ ಬಿಡಲೊಲ್ಲ. ಹಾಗೆಯೇ ಕೈ ಹಿಡಿದುಕೊಂಡು ಊರಂಚಿನಲ್ಲಿರುವ ತನ್ನ ಮುರುಕು ಮನೆಗೆ ಕರೆದುತಂದ.  
ನಾಲ್ಕು ಜೀವಗಳ ಉದರಪೋಷಣೆಯ ಜವಾಬ್ದಾರಿ ಹೆಗಲಿಗೇರಿಸಿಕೊಂಡ ಸ್ವರನ್ ಎದೆಗೆಡಲಿಲ್ಲ. ಹಗಲಲ್ಲಿ ಹೊಲದಲ್ಲಿ ಗಾಣದೆತ್ತಿನಂತೆ ದುಡಿದರೆ, ರಾತ್ರಿ ಹೊತ್ತು ಮನೆಯಲ್ಲಿ ಹೊಲಿಗೆಯಂತ್ರವನ್ನಿಟ್ಟುಕೊಂಡು ಬಟ್ಟೆ ಹೊಲಿಯುತ್ತಿದ್ದಳು. ಜತಿಂದರ್ ಪ್ರತಿ ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗುತ್ತಿದ್ದ. ಜೀವನಚಕ್ರ ಉರುಳುತ್ತಾ  ಜತಿಂದರ್ ಗೆ ಹರೆಯ ತುಂಬುವ ಹೊತ್ತಿಗೆ ಮೂರು ವೃದ್ಧ ಜೀವಗಳು ಪರಲೊಕ ಯಾತ್ರೆ ಮುಗಿಸಿ ಆಗಿತ್ತು. ಬಿಸಿರಕ್ತದ ತರುಣ ಜತಿಂದರ್ ಪದವಿ ಪರೀಕ್ಷೆ ಮುಗಿಸಿ ಭಾರತೀಯ ಸೇನೆ ಸೇರಿದ್ದ. ಸ್ವರನ್ ಆತನ ಇಷ್ಟಕ್ಕೆ ವಿರುದ್ಧವಾಗಿ  ಎನೂ ಹೇಳಲು ಆಗದೇ ಎಲ್ಲ ವಾಹೆ ಗುರು ಇಟ್ಟಂತಾಗಲಿ ಎಂದು ಕೈಚೆಲ್ಲಿದ್ದಳು. ಈಗ ಆಕೆಗೆ ಮೊದಲಿನಂತೆ ಕೆಲಸ ಮಾಡುವ ಅಗತ್ಯವಿರಲಿಲ್ಲ. ತಿಂಗಳು ತಿಂಗಳು ಸರಹದ್ದಿನಲ್ಲಿರುವ ಮಗನ ಪತ್ರ ಹಾಗೂ ಮನಿ ಆರ್ಡರ್ ತಲುಪುತ್ತಿತ್ತು. ಬದುಕು ಸುಲಭವಾಗಿತ್ತು. ಆದರೆ ಮಗ ಹತ್ತಿರವಿಲ್ಲದೆ  ಕಾಲ ಕಳೆಯುವುದೇ ದುಸ್ತರವಾಗಿಬಿಟ್ಟಿತ್ತು. ತನ್ನೆಲ್ಲ ಸಮಯವನ್ನು ಗುರುದ್ವಾರದಲ್ಲಿನ ಸೇವೆಯಲ್ಲಿ ಕಳೆಯುತ್ತಿದ್ದಳು. ಮಗನ ಮದುವೆ ಮಾಡಿ ಮೊಮ್ಮಕ್ಕಳ ಆಡಿಸುವ ಕನಸು ಕಾಣುತ್ತಿದ್ದಳು. ಅಷ್ಟರಲ್ಲೆ ಬರಸಿಡಿಲಿನಂತೆ ಬಂದೆರಗಿತ್ತು ಆ ಸುದ್ದಿ! ಜತಿಂದರ್ ಸರಹದ್ದಿನಲ್ಲಿ ಉಗ್ರಗಾಮಿಗಳ ಜೊತೆ  ನಡೆದ ಗುಂಡಿನ ಕಾಳಗದಲ್ಲಿ ವೀರಮರಣವನ್ನಪ್ಪಿದ್ದ. ಮತ್ತೆ ಸ್ವರನ್ ನ ಮಡಿಲು ಬರಿದಾಗಿತ್ತು. ವಿಧಿ ಇನ್ನೊಂದು ಸಲ ಕ್ರೂರ ನಗೆ ನಕ್ಕಿತ್ತು.
ಸರಕಾರ ಜತಿಂದರ್ ನ ಸಾಹಸವನ್ನು ಗುರುತಿಸಿ ಮರಣೋತ್ತರ ಪ್ರಶಸ್ತಿಯನ್ನು ಘೋಷಿಸಿತ್ತು. ಪ್ರಶಸ್ತಿ ಸ್ವೀಕರಿಸಲು ಎದ್ದು ನಿಂತಾಗ ಹೆಮ್ಮೆಯಿಂದ ಎದೆಯುಬ್ಬಿದ್ದರೂ ಮನಸ್ಸು ವೇದನೆಯಿಂದ ತೊಳಲುತ್ತಿತ್ತು. ಪ್ರಶಸ್ತಿ ಸ್ವೀಕರಿಸಿ ತಿರುಗಿ ತನ್ನ ಕುರ್ಚಿಗೆ ತಲುಪುವಷ್ತರಲ್ಲಿ ಕಣ್ಣುಕತ್ತಲೆ ಬಂದು  ಧರಾಶಾಯಿಯಾದಳು. ಮತ್ತೆ ಕಣ್ಣು ಬಿಟ್ಟಾಗ ನಗು ಮುಖದ ಮಹಿಳೆಯೊಬ್ಬಳು ಪ್ರೀತಿಯಿಂದ ಉಪಚರಿಸುತ್ತಿದ್ದಳು. ನೀರು ಕುಡಿದು ಸ್ವಲ್ಪ ಚೇತರಿಸಿಕೊಂಡ ಮೇಲೆ ತಾನು 'ಆಶಾ' ಎಂಬ ಮಹಿಳೆ ಮತ್ತು ಅನಾಥ ಮಕ್ಕಳ ಆಶ್ರಮದಲ್ಲಿರುವುದಾಗಿ ತಿಳಿಯಿತು. ಆಶ್ರಮದ ಸಂಚಾಲಕಿಯಾದ  ಸ್ನೇಹಮಯಿಯಾದ ಮಾ ಸ್ವರನ್ ಳಿಗೆ ಆಶ್ರಮದ ವಿವಿಧ ವಿಭಾಗಗಳನ್ನು ಚಟುವಟಿಕೆಗಳನ್ನು ಪರಿಚಯಿಸಿದರು. ಎಳೆ ಮಕ್ಕಳಿಂದ ಹಿಡಿದು ವೃದ್ಧರವರೆಗಿನ ಅನಾಥರ ಆ ದೊಡ್ಡ ಕುಟುಂಬ ಸ್ವರನ್ ಳ ದುಖ ದುಗುಡಗಳನ್ನು ಕಡಿಮೆ ಮಾಡಿತು.  ಮುಂದೇನು? ಯಾರಿಗಾಗಿ ಈ ಜೀವನ ಎಂಬ  ಬ್ರಹ್ಮಪ್ರಶ್ನೆಗೆ ಉತ್ತರ ಹೊಳೆದಂತೆ ಸ್ವರನ್ ಳ ಮುಖದಲ್ಲಿ ಮೆಲ್ಲನೆ ಮಂದಹಾಸ ಮೂಡತೊಡಗಿತು.

Tuesday 2 October 2007

ಹೀಗೊಂದು ದೋಣಿಯಾನ!

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ

ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ...

ಕುವೆಂಪು ಕವನ ನೆನಪಾಯಿತು.



ಬೀಸುಗಾಳಿಯೇನೂ ಇರಲಿಲ್ಲ. ಅಂತೆಯೇ ದೊಡ್ಡ ತೆರೆಗಳೂ ಇರಲಿಲ್ಲ. ನದಿ ಏಂದಿನಂತೆ ಪ್ರಶಾಂತವಾಗಿ ಹರಿಯುತ್ತಿತ್ತು. ನದಿಯ ಹರಿವಿನೊಂದಿಗೆ ದೋಣಿ ಸಾಗುತ್ತಾ ನಾಡು ದೂರಾಯಿತು. ಕಾಡು ಹತ್ತಿರವಾಯಿತು. ಅಂತೆಯೇ ಪ್ರಕೃತಿಯೊಂದಿಗಿನ ನಮ್ಮ ಮುಖಾಮುಖಿ!


ಸೂರ್ಯ ನದಿಯ ಪಥದ ಇಕ್ಕಡೆಗಳಲ್ಲೂ ಹುಲುಸಾಗಿ ಬೆಳೆದಿದ್ದ ಗಿಡಮರಗಳ ಮಧ್ಯೆ ಕಣ್ಣುಮುಚ್ಹಾಲೆಯಾಡುತ್ತಿದ್ದರೆ, ಉದ್ದಕ್ಕೆ ಮರಗಳಿಂದ ಇಳಿದುಬಿದ್ದ ಬಳ್ಳಿಗಳು ಗಾಳಿಗೆ ಬಳುಕುತ್ತಾ ತೊನೆದಾಡಿ ಸ್ವಾಗತ ಕೋರುತ್ತಿದ್ದವು. ಎಲೆಗಳೆಡೆಯಿಂದ ತೂರಿ ಬಂದ ಹೊಂಬಿಸಿಲ ಕೋಲುಗಳು ಜಲದಲೆಗಳೊಂದಿಗೆ ಮಿಲನ ಹೊಂದಿ ಅಲ್ಲಲ್ಲಿ ಬೆಳಕಿನ ಚಿತ್ತಾರ ಬಿಡಿಸಿತ್ತು. ಮೀನುಗಳೂ ಅಲ್ಲೊಮ್ಮೆ ಇಲ್ಲೊಮ್ಮೆ ಮಿಂಚಿ ಮರೆಯಾಗುತ್ತಾ ಚಿನ್ನಾಟ ನಡೆಸಿದ್ದವು. ನೀರಿನ ಮೇಲಿಂದ ಹಾದು ಬಂದ ತಂಗಾಳಿ ಮೈಮನಗಳಿಗೆ ಮುದ ನೀಡುತ್ತಿತ್ತು. ಹಕ್ಕಿಗಳ ಕಲರವ, ನದಿಯ ಜುಳುಜುಳು ಇವೆರಡೇ ಸದ್ದು! ಸಮಯವೇ ಸ್ತಬ್ಧವಾದಂತೆನಿಸಿತು. ಆ ಕ್ಷಣಗಳೇ ಮಧುರ! ಒಂದೆರಡು ಹಂಸಗಳು ದೋಣಿಯ ಜೊತೆಯಲ್ಲಿ ತೇಲಿಬರುತ್ತಾ ನಮ್ಮೊಂದಿಗೆ ಪೈಪೋಟಿ ನಡೆಸುತ್ತಿದ್ದವು. ಹೀಗಿತ್ತು ನಮ್ಮ ಮೊದಲ ದೋಣಿಯಾನ! ನದಿ ದಡದಲ್ಲಿಯೇ ಪುಟ್ಟ ಮನೆಯೊಂದಿದ್ದರೆ.. ಎಂಬ ಹಂಬಲ ಎದೆ ತುಂಬಿದ್ದಂತೂ ನಿಜ!

ನಮ್ಮ ಯಾನ ಹೀಗೆ ಸಾಗುತ್ತಾ, ಹಲಕೆಲವು ಸೇತುವೆಗಳ ಕೆಳಗಿಂದ, ಮನೆಗಳ ನಡುವಿಂದ ಹೊರಬಂದು ಮುಂದುವರೆಯಿತು.


ದೂರದ ಚರ್ಚಿನ ಗೋಪುರದ ಮೇಲೆ ಹಾರಾಡುತ್ತಿರುವ ಬಾವುಟ ನಮ್ಮನ್ನು ಮತ್ತೆ ಈ ಲೋಕಕ್ಕೆ ಮರಳಿಸಿತು.



ನಾಡು ಮತ್ತೆ ಹತ್ತಿರವಾಯಿತು. ಕಾಡು ದೂರಾಯಿತು.

ಕಣ್ತುಂಬುವಷ್ಟು ಹಸಿರ ಝರಿ, ಕಿವಿ ತುಂಬುವಷ್ಟು ಹಕ್ಕಿಗಳಿಂಚರ, ರೀಲು ತುಂಬುವಷ್ಟು ಚಿತ್ರಗಳು, ಮನಸ್ಸಿನ ತುಂಬಾ ಕಳೆದ ಮಧುರ ಕ್ಷಣಗಳ ನೆನಪುಗಳನ್ನು ತುಂಬಿಕೊಂಡು ದೋಣಿಯಿಂದಿಳಿದು ನದಿಗುಂಟ ಮನೆಕಡೆ ನಡೆಯುತ್ತಿರಬೇಕಾದರೆ ಹಂಸವೊಂದು ನಾ ನಿನ್ನ ಬಿಡಲಾರೆ ಎಂದು ಜತೆಯಲೇ ತೇಲಿ ಬಂತು.


Tuesday 3 July 2007

ಒಂದು ಮುಂಜಾನೆ...

ದೊಂದು ಶನಿವಾರ. ರಜೆಯಾದ್ದರಿಂದ ಹಿಂದಿನ ರಾತ್ರಿ ಮಲಗುವಾಗಲೇ ಯೋಚಿಸಿದ್ದೆ ನಾಳೆ ಬೆಳಗ್ಗೆ ಬೇಗ ಏಳುವ ಗಡಿಬಿಡಿಯಿಲ್ಲ. ಆರಾಮವಾಗಿ ಎದ್ದರಾಯಿತು. ಆದರೆ ಆ ಮುಂಜಾವಿನ ಸಿಹಿನಿದ್ದೆ ಸವಿಯಲಾಗಲಿಲ್ಲ. ಗಾಳಿಗೆಂದು ತೆರೆದಿಟ್ಟಿದ್ದ ಕಿಟಕಿಯಿಂದ ಎನೋ ಸದ್ದು ನಿದ್ದೆಗೆಡಿಸತೊಡಗಿತು. ಹಾಳಾಗಿ ಹೋಗಲಿ ಈ ಕಿಟಕಿಯನ್ನಾದರೂ ಮುಚ್ಚಿದ್ರೆ ಇನ್ನು ಸ್ವಲ್ಪ ಹೊತ್ತು ಮಲಗಬಹುದು ಎಂದು ಎದ್ದರೆ ನೋಡುವುದೇನು?

ರಂಗುರಂಗಿನ ಬಿಸಿ ಗಾಳಿ ಬಲೂನುಗಳು!

ಅರೆ! ಇದೇನಾಗುತ್ತಿದೆ ಬೆಳಬೆಳಗ್ಗೆ? ನಾನು ಕನಸೇನಾದರೂ ಕಾಣುತ್ತಿಲ್ಲವಷ್ಟೆ ಎಂದು ಕಣ್ಣುಜ್ಜಿಕೊಂಡು ಮತ್ತೆ ನೋಡಿದ್ರೆ ಇನ್ನೂ ಅವು ಅಲ್ಲಿಯೇ ಇವೆ. ಹೊರಗಿರುವ ರಗ್ಬಿ ಮೈದಾನದ ತುಂಬಾ ತುಂಬಿಕೊಂಡಿವೆ. ಗಾಳಿ ತುಂಬಿಸಿಕೊಂಡು ಹಿಗ್ಗುತ್ತಿವೆ. ಈಗ ಅರ್ಥವಾಯಿತು. ಈ ಗಾಳಿ ತುಂಬುವ ಯಂತ್ರದ ಸದ್ದೇ ನನ್ನ ಸಿಹಿನಿದ್ದೆ ಕೆಡಿಸಿದ್ದು ಎಂದು. ಓಡಿ ಹೋಗಿ ಕೆಮೆರಾ ಕೈಗೆತ್ತಿಕೊಂಡೆ. ಕ್ಲಿಕ್ಕಿಸತೊಡತೊಡಗಿದೆ.

ಕೆಲವು ಬಲೂನುಗಳು ಆಗಲೇ ಅಗಮ್ಯದತ್ತ ತಮ್ಮ ಪಯಣ ಆರಂಭಿಸಿದ್ದವು. ಇನ್ನು ಕೆಲವು ಹೊರಡುವ ಸಿದ್ಧತೆಯಲ್ಲಿದ್ದವು.

ಅದೋ ಇನ್ನೊಂದು ಮೇಲೇರಿತು.

ಅದರ ಹಿಂದೆಯೇ ಕೆಂಬಣ್ಣದ್ದು ಮತ್ತೊಂದು!

ಮತ್ತೆರಡು ತದ್ರೂಪಿಗಳಂತೆ ಕಂಡವು. ಅವು ಕೂಡ ಜೊತೆಜೊತೆಯಾಗಿ ಬಾನಂಗಳದಲ್ಲಿ ತೇಲಿಹೋದವು.

ಅಷ್ಟು ಹೊತ್ತಿಗೆ ಇನ್ನೊಂದು 'ನಿಲ್ಲಿ ಗೆಳೆಯರೆ ನಾನು ಬರುವೆ' ಎಂದು ಹವೆ ತುಂಬಿಕೊಳ್ಳತೊಡಗಿತು. ಬಿಸಿಗಾಳಿ ತುಂಬಿ ಹಗುರಾಗಿ ಮೇಲೇರಿತು.

ಅದರ ಹಿಂದೆ ಮತ್ತೊಂದು, ಮಗದೊಂದು ಇನ್ನೊಂದು. ನನ್ನ ಕೆಮೆರಾಕ್ಕೆ ಸುಗ್ಗಿಯೋಸುಗ್ಗಿ!

ನೋಡುನೋಡುವಷ್ಟರಲ್ಲಿ ಬಲೂನುಗಳಿಂದ ತುಂಬಿದ್ದ ಮೈದಾನ ಖಾಲಿಯಗತೊಡಗಿತು. ಕೊನೆಗೆ ಉಳಿದಿದ್ದ ಬಲೂನೊಂದು ಹಿಗ್ಗಿ ಹಾರೇಹೋಯಿತು.
ಯಾರು ಈ ಯಾತ್ರಿಕರು? ಎಲ್ಲಿಗೀ ಪಯಣ?

ಎಲ್ಲಿ ಹಾರಿಹೋಗುತ್ತಿವೆ ಈ ಚಂದದ ಹಕ್ಕಿಗಳು?


ಅದೋ ಆ ಗುಡ್ಡದಂಚಿನಲ್ಲಿ ಕಣ್ಮರೆಯಾಗುತ್ತಿವೆ.

'ಹೋಗಿ ಬನ್ನಿ. ನಾನಿಲ್ಲೇ ಕಾಯುತ್ತಿರುವೆ' ಎಂದು ವಿದಾಯ ಕೋರಿದೆ.

Monday 25 June 2007

"ಈ ವಿಶ್ವ ಚಿಕ್ಕದು"

ಇವತ್ತು ಬೆಳಗ್ಗೆ ಮಹಡಿಯಿಂದ ಕೆಳಗಿಳಿಯಬೇಕಾದರೆ ನನ್ನ ಮನೆಯೊಡತಿ ಕ್ರಿಸ್ಟೀನ್ ಎದುರಾದಳು. ಏನೋ ಗಹನವಾದ ಆಲೋಚನೆಯಲ್ಲಿ ಇದ್ದಂತಿತ್ತು. ನನ್ನನ್ನು ನೋಡಿ ತನ್ನ ಎಂದಿನ ಮುಗುಳ್ನಗು ಬೀರಿ "ಈ ಲೋಕ ಹುಚ್ಚು ಸಂತೆಯಾಗಿಬಿಟ್ಟಿದೆ. ಎಲ್ಲರೂ ಎಲ್ಲಿ ಇರಬೇಕೋ ಅಲ್ಲಿ ಇಲ್ಲ. ಎಲ್ಲರೂ ತಪ್ಪು ಸ್ಥಳಗಳಲ್ಲಿದ್ದಾರೆ." ಅಂದಳು. ನನಗವಳ ಮಾತಿನ ತಲೆಬುಡ ಅರ್ಥವಾಗಲಿಲ್ಲ.

ನಾವು ಒಂದೇ ಮನೆಯಲ್ಲಿದ್ದರೂ ಎದುರಾಗುತ್ತಿದ್ದುದು ಕಮ್ಮಿಯೇ. ಎದುರಾದರೂ ಮಾತುಕತೆಯೆಲ್ಲ ಬರೇ ಔಪಚಾರಿಕವಷ್ಟೆ. ಹೆಚ್ಚೆಂದರೆ ಈ ದೇಶದ ಅನಿಶ್ಚಿತ ಹವಾಮಾನದ ಬಗ್ಗೆ ಒಂದೆರಡು ಮಾತು ಬರ್ತಾ ಇತ್ತು. ತಿಳಿಸಬೇಕಾದದ್ದು, ತಿಳಿಯಬೇಕಾದದ್ದು ಎಲ್ಲವೂ ಈ-ಮೇಲ್ ಮುಖಾಂತರವೇ. ನನಗವಳ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. 'ನಾಲ್ಕು ಮಕ್ಕಳು, ಡೈವೋರ್ಸಿ' ಅಂತ ಒಂದು ಸಲ ಹೇಳಿದ ನೆನಪು. ಆದರೆ ಮಕ್ಕಳು ಯಾರೂ ಅವಳ ಜೊತೆ ಇಲ್ಲ. ಈಕೆ ಒಂಟಿಯಾಗಿ ವಾಸಿಸುತ್ತಾಳೆ ಎಂದೂ ಗೊತ್ತು. ಈ ದೇಶದಲ್ಲಿ ಅದು ಸರ್ವೇಸಾಮಾನ್ಯವಾದ್ದರಿಂದ ಅದರ ಬಗ್ಗೆ ಹೆಚ್ಚು ಯೋಚಿಸಲು ಹೋಗಿರಲಿಲ್ಲ. ಒಂಟಿತನ ಕ್ರಿಸ್ಟೀನ್ ಗೆ ಎಂದೂ ಸಮಸ್ಯೆಯೆನಿಸಿದ್ದಿಲ್ಲ. ದಿನವಿಡೀ ಕೆಲಸವಾದರೆ ಸಂಜೆಗಳು ಸ್ನೇಹಿತರಿಗೆ ಮೀಸಲು. ವಾರಾಂತ್ಯ ಬಂದರೆ ಮಕ್ಕಳು ಭೇಟಿ ನೀಡುತ್ತಿದ್ದರು. ಇಲ್ಲವೇ ಇವಳು ಹೋಗಿ ನೋಡಿ ಬರುತ್ತಿದ್ದಳು. ಎಷ್ಟೋ ಸಲ ಬ್ರಿಸ್ಟಲ್ ನಲ್ಲಿರುವ ತನ್ನ ಮೊಮ್ಮಕ್ಕಳ ಬೇಬಿಸಿಟ್ಟಿಂಗ್ ಗೆ ಹೋಗ್ತಾ ಇದ್ದಳು.
ಹೀಗೆ ಎಂದೂ ತಲೆಬಿಸಿ ಮಾಡದ ಹಾಯಾಗಿರುವ ಕ್ರಿಸ್ಟೀನ್ ಗೆ ಇವತ್ತು ಯಾಕಪ್ಪ 'ಹುಚ್ಚು ವಿಶ್ವ'ದ ಕಲ್ಪನೆ ಬಂತು? ಇವಳಿಗ್ಯಾಕನ್ನಿಸಿತು ಎಲ್ಲರೂ ತಪ್ಪುಜಾಗದಲ್ಲಿದ್ದಾರೆ? ಅಂತ ತಿಳಿಯಲು ಕುತೂಹಲವೆನಿಸಿತು. ನನ್ನ ಗೊಂದಲಭರಿತ ಮುಖ ನೋಡಿದ ಆಕೆ ಅಂದ್ಳು "ಈಗ ತಾನೇ ನಾನು ನನ್ನ ಮಗಳೊಂದಿಗೆ ಮಾತನಾಡಿದೆ. ಅವಳು ಭಾರತದಲ್ಲಿದ್ದಾಳೆ. ಇಂದು ಅವಳ ಮಗುವಿನ ನಾಮಕರಣ ಹಿಂದೂವಿಧಿಯ ಪ್ರಕಾರ ನಡೆಯಲಿದೆ. ನಾನು ಅವಳನ್ನು, ಅವಳೆರಡು ಚಿಕ್ಕ ಮಕ್ಕಳನ್ನು ಹಾಗೂ ಅವಳ ಪತಿಯನ್ನು ನೋಡದೆ ಒಂದೂವರೆ ವರ್ಷವಾಯಿತು.ಇನ್ನು ಬರುವ ಕ್ರಿಸ್ಮಸ್ ವರೆಗೆ ನೋಡುವ ಹಾಗೆ ಕಾಣುವುದಿಲ್ಲ." ಈಗ ಸ್ವಲ್ಪ ವಿಷಯ ತಿಳಿಯಾಗತೊಡಗಿತು. ಕ್ರಿಸ್ಟೀನ್ ಮಗಳು ಹಿಂದೂ ಭಾರತೀಯನನ್ನು ವಿವಾಹವಾಗಿ ಭಾರತದಲ್ಲಿ ನೆಲಸಿದ್ದಾಳೆ ಅಂತ ಊಹಿಸಿದೆ. ನನ್ನದು ಎನನ್ನೂ ಕೆದಕಿ ಕೇಳುವ ಸ್ವಭಾವವಲ್ಲವಾದ್ದರಿಂದ ನಾನಂದೆ "ನೀನು ನಿನ್ನ ಮಗಳನ್ನು ಮಿಸ್ ಮಾಡ್ತಾ ಇದ್ದೀಯ" ಅಂತ. ಅದಕ್ಕವಳಂದಳು. "ಅದು ಹೌದು. ಆದರೆ ನಾನು ಯೋಚನೆ ಮಾಡ್ತಾ ಇದ್ದೆ ನೋಡು. ನೀನು ಭಾರತೀಯಳು. ನೀನು ಈಗ ಬ್ರಿಟನ್ ನಲ್ಲಿದ್ದಿ. ನಿನ್ನ ಪೇರೆಂಟ್ಸ್ ನಿನ್ನನ್ನು ಎಷ್ಟು ಮಿಸ್ ಮಾಡ್ತಾರೋ ಏನೋ? ನನ್ನ ಮಗಳು ಬ್ರಿಟಿಷ್. ಆದ್ರೆ ಅವಳು ಈಗ ಭಾರತದಲ್ಲಿ ಸೆಟಲ್ ಆಗಿದ್ದಾಳೆ. ನನ್ನ ಸೊಸೆ ಕೂಡಾ ಭಾರತೀಯಳು. ಆದ್ರೆ ಅವಳಿಲ್ಲಿ ಸೆಟಲ್ ಆಗಿದ್ದಾಳೆ. ಅದಕ್ಕೆ ನಾನು ಹೇಳಿದ್ದು ಎಲ್ಲರೂ ಎಲ್ಲಿರಬೇಕೋ ಅಲ್ಲಿಲ್ಲ. ತಪ್ಪುಜಾಗಗಳಲ್ಲಿದ್ದಾರೆ." ನನಗೋ ಗೋಜಲು ಗೋಜಲೆನಿಸಿತು. ನಾನು ಹಾಗೆಯೇ. ನನಗೆ ಸರಳ ಸುಲಭ ವಿಷಯಗಳೆಂದರೆ ಹಿತ. ಎಲ್ಲಿ ಸಂಕೀರ್ಣಗೊಳ್ಳುವುದೋ ಅಲ್ಲಿಗೆ ನಾನದನ್ನು ಬಿಟ್ಟುಬಿಡುತ್ತೇನೆ. ತುಂಬಾ ತಲೆಕೆಡಿಸಲು ಹೋಗುವುದಿಲ್ಲ. ಈ ಮಾತು ನನ್ನ ಕೆಲಸದ(ಸಂಶೋಧನೆ) ವಿಷಯದಲ್ಲಂತೂ ಸುಳ್ಳು. ಅಲ್ಲಿ ಕ್ಲಿಷ್ಟ ವಿಷಯ ಎಂದ್ರೆ ನನಗೆ ಪ್ರೀತಿ. ಆ ಸಮಸ್ಯೆಗಳನ್ನು ಬಿಡಿಸುವ ತನಕ ನನಗೆ ನೆಮ್ಮದಿಯಿರುವುದಿಲ್ಲ. ಆದರೆ ಈ ಉತ್ತರವಿಲ್ಲದ ಪ್ರಶ್ನೆಗಳೆಂದರೆ ನನಗೆ ಅಲರ್ಜಿ. ನಾನು ತಣ್ಣಗೆ ನಕ್ಕು "ಕ್ರಿಸ್ಟೀನ್, ಈಗ ವಿಶ್ವ ಚಿಕ್ಕದಾಗಿದೆಯಲ್ಲ." ಅಂದೆ. ಅವಳು ಮುಗುಳ್ನಕ್ಕು "ಹೂಂ. ಹಣವಿದ್ದವರಿಗೆ ಮಾತ್ರ" ಅಂದ್ಳು.
ಹೊರಬಂದು ಲ್ಯಾಬ್ ಕಡೆ ಬರಬೇಕಾದ್ರೆ ಮನಸ್ಸು ಚಿಂತನೆಗೆ ತೊಡಗಿತ್ತು. ನಿಜವಾಗಲೂ ನಾವೆಲ್ಲ ತಪ್ಪುಸ್ಥಳಗಳಲ್ಲಿದ್ದೇವಾ? ನಾನು, ಕ್ರಿಸ್ಟೀನ್ ಸೊಸೆ ಭಾರತೀಯರಾದ್ದರಿಂದ ಭಾರತದಲ್ಲಿರಬೇಕಿತ್ತಾ? ಕ್ರಿಸೀನ್ ಮಗ್ಳು ಇಲ್ಲಿರಬೇಕಿತ್ತಾ? ತಪ್ಪು ಹೌದಾದ್ರೆ ಯಾಕೆ ಹೀಗಾಯ್ತು? ಆ ಯೋಚನೆ ಕೂಡಾ ಬೇಡವೆನ್ನಿಸಿತು. ಮೇಜಿನ ಮೇಲಿದ್ದ ಇನ್ನೂ ಬಿಡಿಸಿರದ NMR spectra ಕಣ್ಣಿಗೆ ಬಿತ್ತು. ಈ ಪ್ರಶ್ನೆಗಳಲ್ಲದ ಪ್ರಶ್ನೆಗಳೊಂದಿಗೆ ಗುದ್ದಾಡಿ ತಲೆನೋವು ಬರಿಸಿಕೊಳ್ಳೋ ಬದ್ಲು ಇದನ್ನು ಬಿಡಿಸಿದ್ರೆ ನಾನು ಮಾಡಿರೋ ಕಂಪೌಂಡ್ ಯಾವುದು ಅಂತಾದ್ರೂ ಗೊತ್ತಾಗುತ್ತಲ್ಲ ಅಂತ ಖುಶಿಯಿಂದ ಹತ್ತಿರಕ್ಕೆಳೆದುಕೊಂಡೆ.

Sunday 10 June 2007

ಅರ್ಚನ ಪುರಾಣ!!!

"ಅರ್ಚನ" ಅದು ನನ್ನ ಹೆಸರು. ಇನ್ನು ಅದರ ಪುರಾಣ ಅದೆಲ್ಲಿಂದ ಶುರು ಮಾಡಲಿ? ಶುರುವಿನಿಂದಲೇ ಶುರು ಮಾಡುತ್ತೇನೆ.

ನಮ್ಮಮ್ಮನ ಹೆಸರು ತಾರ ಅಂತ. ಅವರ ಹೆಸರು ಇಂಗ್ಲೀಷ್ ವರ್ಣಮಾಲೆಯ ಕೊನೆಯ ಅಕ್ಷರಗಳಲ್ಲಿ ಬರೋದ್ರಿಂದ ಅವ್ರಿಗೆ ರಗಳೆ. ರಗಳೆ ಯಾಕಪ್ಪ ಅಂದ್ರೆ ಸ್ಕೂಲು ಕಾಲೇಜುಗಳಲ್ಲಿ ಹೆಸರಿನ ಪಟ್ಟಿ ಇಂಗ್ಲೀಷ್ ವರ್ಣಮಾಲೆಯ ಪ್ರಕಾರ ಇರೋದ್ರಿಂದ ಹಾಜರಿ ಕರೀಬೇಕಾದ್ರೆ ನಮ್ಮಮ್ಮನ ಹೆಸರು ಕೊನೆಗೆ. ಪರೀಕ್ಷೆಗೆ ಬರೀಬೇಕಾದ್ರೆ ಕೂತುಕೊಳ್ಳಬೇಕಾದ್ದು ಕೊನೆಗೆ. ಡೆಸ್ಕುಗಳ ಬೆಂಚುಗಳ ಅವಸ್ಥೆ ಕೊನೆಸಾಲುಗಳಲ್ಲಿ ಅಷ್ಟಕ್ಕಷ್ಟೆ. ಈ 'ಕೊನೆ'ಗಳ ರಗಳೆಗಳಿಂದ ಬೇಸತ್ತ ನಮ್ಮಮ್ಮ ಒಂದು ಪ್ರತಿಜ್ಞೆ ಮಾಡಿದ್ರು. ಅದೇನಪ್ಪಾ ಅಂದ್ರೆ 'ನಾನು ಅನುಭವಿಸಿದ ರಗಳೆಗಳನ್ನು ನನ್ನ ಮಕ್ಕಳು ಅನುಭವಿಸಬಾರದು' ಅಂತ. ಅದಕ್ಕಾಗಿ ಅವ್ರ ಹೆಸರು "ಅ" ಅಕ್ಷರದಿಂದ ಶುರು ಆಗೋ ಹಾಗೆ ಇಡಬೇಕು ಅಂತ. ಸಾಕಲ್ಲ ಪೀಠಿಕೆ! ಸುಮಾರಾಯ್ತು.

ಅಂತೂ ಇಂತೂ ನಾನು ಹುಟ್ಟಿದೆ. ನಮ್ಮಮ್ಮ ಅವರಮ್ಮನ ಮನೆಗೆ ಅಂದ್ರೆ ಮಂಗ್ಳೂರಿಗೆ ಹೋಗಿದ್ರಿಂದ ನಮ್ತಂದೆಗೆ ಬೆಳ್ತಂಗಡಿಗೆ ದೂರವಾಣಿಯ ಮುಖಾಂತರ ಸುದ್ದಿ ಮುಟ್ಟಿತು. ನಮ್ತಂದೆ ಮಂಗ್ಳೂರಿಗೆ ನಮ್ಮನ್ನು ನೋಡಲು ಬರುತ್ತಾ ಇರಬೇಕಾದ್ರೆ ಒಂದು ರಿಕ್ಷಾ ಎದುರಿಂದ ಬಂತು. ಅದರ ಮುಂದೆ ಬರೆದಿತ್ತು "ಅರ್ಚನ". ನಮ್ತಂದೆಗೆ ತುಂಬಾ ಹಿಡಿಸಿತು ಆ ಹೆಸರು. ಅಂತೂ ನಾನು 'ಅರ್ಚನ'ಳಾದೆ. ನಮ್ಮಲ್ಲಿ ಒಂದು ಹೆಸರು ಹೊರಬಳಕೆಗೆ. ಒಂದು ಸುಲಭದ್ದು ಮನೆಬಳಕೆಗೆ. ನಮ್ಮ ಬಳಗದಲ್ಲಿ ಆಗಲೇ ಒಂದು ಶಮ್ಮಿ, ಒಂದು ಚುಮ್ಮಿ ಇದ್ರು. ಹಾಗೆ ನಾನು ಅವ್ರಿಗೆ ಪ್ರಾಸವಾಗುವಂತೆ 'ಅಮ್ಮಿ' ಆದೆ.

ನಮ್ಮಮ್ಮನ ಆಸೆಯಂತೆ ನನ್ನ ಹೆಸರೇ ಎಲ್ಲ ಕಡೆ ಮೊದಲಾಯಿತು. ಹಾಜರಿಯಲ್ಲಿ ಮೊದಲು. ಪರೀಕ್ಷೆಯಲ್ಲಿ ಕೂತುಕೊಳ್ಳಲು ಮೊದಲು. ಆದ್ರೆ ನಮ್ಮಮ್ಮನ ಥಿಯರಿ ಪ್ರಕಾರ ನಂಗೆ ಅಷ್ಟೇನೂ ಅನುಕೂಲ ಆದ ಹಾಗೆ ಕಾಣಲಿಲ್ಲ. ಪ್ರಾಕ್ಟಿಕಲ್ ಪರೀಕ್ಷೆಯ ವೈವಾದಲ್ಲಿ ಪರೀಕ್ಷಕರ ಪ್ರಶ್ನೆಗಳ ಬಾಣಗಳ ಮಹಾಪೂರವನ್ನು ಎದುರಿಸುವ ಪ್ರಥಮ ಸಿಪಾಯಿಯಾಗಬೇಕಾಯ್ತು. ನಾನು ಕೋಣೆಯಿಂದ ಹೊರಬಿದ್ದ ತಕ್ಷಣ ಎಲ್ಲ ಸಹಪಾಠಿಗಳು ನನ್ನನ್ನು ಮುತ್ತಿಕೊಳ್ತಾ ಇದ್ರು. 'ಏನು ಕೇಳಿದ್ರು? ಏನು ಕೇಳಿದ್ರು?' ಅಂತ ನಾನು ಹೇಳಿದ ಮೇಲೆ ಅವ್ರಿಗೆಲ್ಲ ಒಂದು ಐಡಿಯಾ ಸಿಕ್ತಾ ಇತ್ತು. ಇನ್ನು ಕಾಲೇಜಲ್ಲಿ ನನ್ನ ಕ್ಲಾಸಲ್ಲಿ ನನ್ನ ಜೊತೆಗೆ ಇನ್ನೂ ಇಬ್ಬರು ಅರ್ಚನ ಇದ್ರು. ನಾನು ಇನಿಷಿಯಲ್ಸು ಏನೂ ಹಾಕ್ಕೊಂಡಿರಲಿಲ್ಲ. ಆದ್ರಿಂದ ಹಾಜರಿ ಕರಿಬೇಕಾದ್ರೆ ಒಬ್ಬರು ಮೇಡಮ್ ಕರೀತಾ ಇದ್ದಿದ್ದು ಹೀಗೆ. "ಪ್ಲೇನ್ ಅರ್ಚನ", ಅರ್ಚನ ಬಿ.ಎಂ., ಅರ್ಚನ ವೀರರಾಜು ಅಂತ. ಅಂತೂ ಉಳಿದಿಬ್ಬರಿಗಿಂತ ನಾನೇ ಮುಂದಿದ್ದರೂ ಪ್ಲೇನ್ ಅರ್ಚನ ಅಂತ ಕರೆಸಕೊಳ್ಳಬೇಕಾದ್ರೆ ಮುಜುಗರ ಆಗುತ್ತಿದ್ದುದು ಸುಳ್ಳಲ್ಲ. ಇರಲಿ ಬಿಡಿ. ಇನ್ನೆನಪ್ಪ ಪುರಾಣ ಅಂದ್ರೆ, ಕಾಲೇಜಿಗೆ ಬಂದ್ಮೇಲೆ ನನ್ನ ಗೆಳತಿಯರು ನನ್ನ ಚಂದದ ಹೆಸರನ್ನು ಮೊಟಕುಗೊಳಿಸುವ ಸಂಭ್ರಮದಲ್ಲಿ ಆರ್ಚಿ, ಅರ್ಚು, ಇನ್ನೂ ಕೆಲವರಂತೂ 'ಚನಾ' ಅಂತ ವಿರೂಪದ ಪರಾಕಾಷ್ಠೆಗೆ ಏರಿಸಿಬಿಟ್ಟಿದ್ದರು. ನಮ್ಮ ಜೀವಶಾಸ್ತ್ರದ ಮೇಡಮ್ ಅದ್ಯಾಕೋ ನನ್ನನ್ನು ಅರಾಕ್ನೆ ಅಂತ ಕರೀತಾ ಇದ್ರು. ನನಗೆ ಅರಾಕ್ನೆ ಕಥೆ ಗೊತ್ತಿದ್ರಿಂದ ಇನ್ನೂ ಮುಜುಗರ. ನಾನೇನೂ ಅವಳ ಹಾಗೆ ದುರಹಂಕಾರಿ ಆಗಿರಲಿಲ್ಲ. ಅದೂ ಇರಲಿ ಬಿಡಿ. ಕಾಲೇಜು ಮುಗಿಸಿ ಕೆಲಸದ ಸಲುವಾಗಿ ಬೆಂಗಳೂರಲ್ಲಿ ರೂಮ್ ಮಾಡ್ಕೊಂಡು ಇರಬೇಕಾದ್ರೆ ನನ್ನ ಮನೆಮಾಲಿಕರು ನಾಲ್ಕು ಜನ ಸಹೋದರಿಯರು. ಅವ್ರು 'ಅರ್ಚನ' ಅಂತ ಏನು ಅಷ್ಟುದ್ದ ಕರೀಬೇಕು ಅಂತ "ರಚ್ಚಿ" ಅಂತ ಮರುನಾಮಕರಣ ಮಾಡಿಯೇಬಿಟ್ರು. ಬೆಳಗಾದ್ರೆ ಸರಿ ರಚ್ಚಿ ನೀರು ಬಂತು, ರಚ್ಚಿ ಅದು, ರಚ್ಚಿ, ಇದು ಅಂತ ಒಳ್ಳೆ ರಚ್ಚೆ ಹಿಡಿಸಿಬಿಡೋರು. ನಂಗೆ ಆ ಹೆಸರು ಎಷ್ಟು ಅಭ್ಯಾಸವಾಗಿ ಹೋಗಿತ್ತು ಅಂದ್ರೆ ಮಂಗ್ಳೂರಿಗೆ ಹೋದಾಗ ಅರ್ಚನ ಅಂತ ಯಾರಾದ್ರೂ ಕರೆದ್ರೆ ಯಾರಪ್ಪ ಅಂತ ಎರಡ್ಸಲ ಯೋಚನೆ ಮಾಡಬೇಕಾಗಿತ್ತು. ಅಂತೂ ಆ ವೇಳೆನೂ ಕಳೀತು. ಆಮೇಲೆ ನಂಗೆ ಮದುವೆ ಆಯಿತು. ಯಾರ ಜೊತೆ ಅಂದ್ರೆ ದಿಲ್ಲಿ ಹುಡ್ಗನ ಜೊತೆ. ಅವರ ಬಳಗದಲ್ಲಿ ಹಿರಿ ಅಜ್ಜಿಯಂದಿರಿಗೆ ನನ್ನ ಹೆಸರು ಹೇಳಲು ನಾಲಗೆ ಹೊರಳದೆ ಅಲಕಾ, ಅಚಲಾ, ಅಚನಾ, ರಚನಾ ಇನ್ನೆನೋ ಆಗಿ ಹೋದೆ. ದಿನಕ್ಕೆ ಹಲವು ಬಾರಿ ಹೆಸರಿನಲ್ಲೇನಿದೆ? ಎಲ್ಲ ಮಾಯೆ! ಅಂತ ದಾರ್ಶನಿಕ ಭಾವದ ಮೊರೆ ಹೋಗುತ್ತಾ ಇದ್ದೆ. ಸಮಾಧಾನ ಪಟ್ಟುಕೊಳ್ತಾ ಇದ್ದೆ.

ಆ ಸಮಯ ಕೂಡ ಕಳೆದು ಹೋಯಿತು. ಓದೋದಕ್ಕೋಸ್ಕರ ನಾನು ಲಂಡನ್ನಿಗೆ ಬಂದೆ. ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ಮಾಡುವ ಅವಕಾಶವೂ ಸಿಕ್ಕಿತು. ನಾನು ನನ್ನ ಪ್ರೊಫೆಸರನ್ನು ಈ ಮೊದಲು ಭೇಟಿಯಾಗಿರಲಿಲ್ಲ. ಬರೇ ಈ ಮೇಲ್ ಮುಖಾಂತರವಷ್ಟೆ ಮಾತುಕತೆ. ಮೊದಲ ಬಾರಿ ಭೇಟಿಯಾದಾಗ ಅವರಂದಿದ್ದು "ವೆಲ್ ಕಮ್ ಟು ಯು.ಕೆ. ಅರ್ಚಾನಾ" ಅಂತ. ಅದೂ ಎಷ್ಟು ಒತ್ತಿ ಹೇಳಿದ್ರು 'ಅರ್ಚಾನಾ' ಅಂತ ಪಾಪ ತುಂಬಾ ಕಷ್ಟ ಪಟ್ಟಿರಬೇಕು. ಅಭ್ಯಾಸನೂ ಮಾಡಿರಬೇಕು. ಮೊದಲ ಸಲ ಭೇಟಿ ಆಗ್ತಿರೋದ್ರಿಂದ ನಂಗೂ ಸರಿಪಡಿಸಲು ಸಂಕೋಚ. ಮುಂದೆ ನೋಡೋಣ ಅಂತ ಸುಮ್ಮನಾದೆ. ನನ್ನನ್ನು ಅವರ ತಂಡಕ್ಕೆ ಹಾಗೆ ಪರಿಚಯ ಮಾಡಿಕೊಟ್ಟ ಕಾರಣ ಎಲ್ಲರ ಬಾಯಲ್ಲಿ "ಅರ್ಚಾನಾ" ನಲಿದಾಡಿತು. ನನ್ನ ಹುಡ್ಗನೂ ನನ್ನನ್ನು ರೇಗಿಸ್ಲಿಕ್ಕೆ 'ಅರ್ಚಾನಾ' ಅಂತ ಶುರು ಮಾಡಿದ. ಸ್ವಲ್ಪ ಹಳಬಳಾದಮೇಲೆ ಒಂದಿನ ಎಲ್ಲರ ಜತೆ ಕಾಫಿ ಕುಡಿತಾ ಇರಬೇಕಾದ್ರೆ 'ಹೆಸರು ಮತ್ತದರ ಸರಿಯಾದ ಉಚ್ಚಾರಣೆ' ಬಗ್ಗೆ ಮಾತು ಬಂತು. ನಾನು ಮೆಲ್ಲನೆ ಅಂದೆ. "ನನ್ನ ಹೆಸರು ಅರ್ಚನ ಅಂತ ಅರ್ಚಾನಾ ಅಲ್ಲ". ಎಲ್ಲರೂ ಪೈಪೋಟಿಗೆ ಬಿದ್ದು ಆ ಪೂರ್ತಿ ದಿನ ನನ್ನನ್ನು ಪುನಃ ಕೇಳಿ ಕೇಳಿ, ಅವರು ಪುನಃ ಹೇಳಿ ಹೇಳಿ, ಅಂತೂ ಮರುದಿನದ ಹೊತ್ತಿಗೆ ನಾನು ಹಳೆಯ 'ಅರ್ಚನ'ಳಾದೆ. ಪುನಃ (ಕರ್ಣ)ಪ್ರಿಯವೆನಿಸಿತು ನನಗೆ ನನ್ನ ಚಂದದ ಹೆಸರು!

ಆದ್ರೂ ಕೆಲವು ಸಲ ಆಭಾಸ ತಪ್ಪಿದ್ದಲ್ಲ. ಒಂದ್ಸಲ ನಾನು ಪ್ರೆಸಂಟೇಶನ್ ಕೊಡೋ ಮುಂಚೆ ನನ್ನನ್ನು ಸಭೆಗೆ ಪರಿಚಯಿಸಿದ ಮಹಾಶಯ ಅಂದಿದ್ದು "ಆರ್ಖಾನಾ" ಅಂತ. ಬೆಚ್ಚಿಬಿದ್ದೆ ನಾನು! ಇದಕ್ಕೆ ಮಂಚೆ ಯಾರೂ ಹೀಗಂದಿರಲಿಲ್ಲ. ಕರ್ಣಕಠೋರ! ಮಾತು ಶುರು ಮಾಡೋ ಮುಂಚೆ ಸ್ವ ಪರಿಚಯ ಮಾಡಿಕೊಳ್ಳಬೇಕಾಯಿತು. ಇನ್ನೂ ಕೆಲವರಿಂದ ಆರ್ಖಾನಾ ಅಂತ ಕರೆಸಿಕೊಂಡಮೇಲೆ ಅದ್ಯಾಕೋ ಕುತೂಹಲ ಶುರು ಅಯಿತು. ಅದ್ಯಾಕೆ ಇವರು archನ್ನು ಆರ್ಖ್ ಅಂತಾರೆ ಆರ್ಚ್ ಯಾಕನ್ನಲ್ಲ ಆಂತ! ಕೆಟ್ಟ ಕುತೂಹಲ ನೋಡಿ! ಶಬ್ದಕೋಶದಲ್ಲಿ ನೋಡಿದಾಗ ಆರ್ಕಿಮೀಡೀಸ್ (archimedes), ಆರ್ಕಿಟೆಕ್ಚರ್ (architecture) ಇನ್ನೂ ಹಲವು ಶಬ್ದಗಳು ಸಿಕ್ಕಿದವು. ಭಾರತೀಯರ ಮುಖಗಳನ್ನು ನೋಡಿದಾಗ 'ಅಬ್ಬ ಇವರಾದ್ರು ಸರಿಯಾಗಿ ಕರೀಬಹುದು' ಅಂತ ಅಂದುಕೊಂಡರೆ ಅವರು ಬಿಳಿಯರ ತಲೆ ಮೇಲೆ ಹೊಡೆದ ಹಾಗೆ 'ಆರ್ಖಾನಾ' ಅಂತ ಮುತ್ತಿನ ಮಣಿ ಉದುರಿಸಿಬಿಟ್ಟಿರುತ್ತಾರೆ. ಅದರ ಮೇಲೆ ಇನ್ನೊಂದು ಬಿರುದು 'ವಿಚಿತ್ರ ಹೆಸರು' (strange name) ಅಂತ. ಏನು ವಿಚಿತ್ರಾನೋ ಆ ಭಗವಂತನಿಗೇ ಗೊತ್ತು.

ಸದ್ಯಕ್ಕಂತೂ ಇಷ್ಟೆ ನಾಮಗಳು ನನಗೆ. ಆದ್ದರಿಂದ ನನ್ನ ಅರ್ಚನ ಪುರಾಣವನ್ನು ಇಲ್ಲಿಗೆ ಸಮಾಪ್ತಗೊಳಿಸುತ್ತೇನೆ. ಈ ಪುರಾಣ ಪಠಣವನ್ನು ಮಾಡಿದವರಿಗೆಲ್ಲ ಶುಭವಾಗಲಿ. ಹೇಗನ್ನಿಸಿತು ಅನ್ನೋದನ್ನು ಹೇಳಲು ಮರೆಯದಿರಿ!