Monday 25 June 2007

"ಈ ವಿಶ್ವ ಚಿಕ್ಕದು"

ಇವತ್ತು ಬೆಳಗ್ಗೆ ಮಹಡಿಯಿಂದ ಕೆಳಗಿಳಿಯಬೇಕಾದರೆ ನನ್ನ ಮನೆಯೊಡತಿ ಕ್ರಿಸ್ಟೀನ್ ಎದುರಾದಳು. ಏನೋ ಗಹನವಾದ ಆಲೋಚನೆಯಲ್ಲಿ ಇದ್ದಂತಿತ್ತು. ನನ್ನನ್ನು ನೋಡಿ ತನ್ನ ಎಂದಿನ ಮುಗುಳ್ನಗು ಬೀರಿ "ಈ ಲೋಕ ಹುಚ್ಚು ಸಂತೆಯಾಗಿಬಿಟ್ಟಿದೆ. ಎಲ್ಲರೂ ಎಲ್ಲಿ ಇರಬೇಕೋ ಅಲ್ಲಿ ಇಲ್ಲ. ಎಲ್ಲರೂ ತಪ್ಪು ಸ್ಥಳಗಳಲ್ಲಿದ್ದಾರೆ." ಅಂದಳು. ನನಗವಳ ಮಾತಿನ ತಲೆಬುಡ ಅರ್ಥವಾಗಲಿಲ್ಲ.

ನಾವು ಒಂದೇ ಮನೆಯಲ್ಲಿದ್ದರೂ ಎದುರಾಗುತ್ತಿದ್ದುದು ಕಮ್ಮಿಯೇ. ಎದುರಾದರೂ ಮಾತುಕತೆಯೆಲ್ಲ ಬರೇ ಔಪಚಾರಿಕವಷ್ಟೆ. ಹೆಚ್ಚೆಂದರೆ ಈ ದೇಶದ ಅನಿಶ್ಚಿತ ಹವಾಮಾನದ ಬಗ್ಗೆ ಒಂದೆರಡು ಮಾತು ಬರ್ತಾ ಇತ್ತು. ತಿಳಿಸಬೇಕಾದದ್ದು, ತಿಳಿಯಬೇಕಾದದ್ದು ಎಲ್ಲವೂ ಈ-ಮೇಲ್ ಮುಖಾಂತರವೇ. ನನಗವಳ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. 'ನಾಲ್ಕು ಮಕ್ಕಳು, ಡೈವೋರ್ಸಿ' ಅಂತ ಒಂದು ಸಲ ಹೇಳಿದ ನೆನಪು. ಆದರೆ ಮಕ್ಕಳು ಯಾರೂ ಅವಳ ಜೊತೆ ಇಲ್ಲ. ಈಕೆ ಒಂಟಿಯಾಗಿ ವಾಸಿಸುತ್ತಾಳೆ ಎಂದೂ ಗೊತ್ತು. ಈ ದೇಶದಲ್ಲಿ ಅದು ಸರ್ವೇಸಾಮಾನ್ಯವಾದ್ದರಿಂದ ಅದರ ಬಗ್ಗೆ ಹೆಚ್ಚು ಯೋಚಿಸಲು ಹೋಗಿರಲಿಲ್ಲ. ಒಂಟಿತನ ಕ್ರಿಸ್ಟೀನ್ ಗೆ ಎಂದೂ ಸಮಸ್ಯೆಯೆನಿಸಿದ್ದಿಲ್ಲ. ದಿನವಿಡೀ ಕೆಲಸವಾದರೆ ಸಂಜೆಗಳು ಸ್ನೇಹಿತರಿಗೆ ಮೀಸಲು. ವಾರಾಂತ್ಯ ಬಂದರೆ ಮಕ್ಕಳು ಭೇಟಿ ನೀಡುತ್ತಿದ್ದರು. ಇಲ್ಲವೇ ಇವಳು ಹೋಗಿ ನೋಡಿ ಬರುತ್ತಿದ್ದಳು. ಎಷ್ಟೋ ಸಲ ಬ್ರಿಸ್ಟಲ್ ನಲ್ಲಿರುವ ತನ್ನ ಮೊಮ್ಮಕ್ಕಳ ಬೇಬಿಸಿಟ್ಟಿಂಗ್ ಗೆ ಹೋಗ್ತಾ ಇದ್ದಳು.
ಹೀಗೆ ಎಂದೂ ತಲೆಬಿಸಿ ಮಾಡದ ಹಾಯಾಗಿರುವ ಕ್ರಿಸ್ಟೀನ್ ಗೆ ಇವತ್ತು ಯಾಕಪ್ಪ 'ಹುಚ್ಚು ವಿಶ್ವ'ದ ಕಲ್ಪನೆ ಬಂತು? ಇವಳಿಗ್ಯಾಕನ್ನಿಸಿತು ಎಲ್ಲರೂ ತಪ್ಪುಜಾಗದಲ್ಲಿದ್ದಾರೆ? ಅಂತ ತಿಳಿಯಲು ಕುತೂಹಲವೆನಿಸಿತು. ನನ್ನ ಗೊಂದಲಭರಿತ ಮುಖ ನೋಡಿದ ಆಕೆ ಅಂದ್ಳು "ಈಗ ತಾನೇ ನಾನು ನನ್ನ ಮಗಳೊಂದಿಗೆ ಮಾತನಾಡಿದೆ. ಅವಳು ಭಾರತದಲ್ಲಿದ್ದಾಳೆ. ಇಂದು ಅವಳ ಮಗುವಿನ ನಾಮಕರಣ ಹಿಂದೂವಿಧಿಯ ಪ್ರಕಾರ ನಡೆಯಲಿದೆ. ನಾನು ಅವಳನ್ನು, ಅವಳೆರಡು ಚಿಕ್ಕ ಮಕ್ಕಳನ್ನು ಹಾಗೂ ಅವಳ ಪತಿಯನ್ನು ನೋಡದೆ ಒಂದೂವರೆ ವರ್ಷವಾಯಿತು.ಇನ್ನು ಬರುವ ಕ್ರಿಸ್ಮಸ್ ವರೆಗೆ ನೋಡುವ ಹಾಗೆ ಕಾಣುವುದಿಲ್ಲ." ಈಗ ಸ್ವಲ್ಪ ವಿಷಯ ತಿಳಿಯಾಗತೊಡಗಿತು. ಕ್ರಿಸ್ಟೀನ್ ಮಗಳು ಹಿಂದೂ ಭಾರತೀಯನನ್ನು ವಿವಾಹವಾಗಿ ಭಾರತದಲ್ಲಿ ನೆಲಸಿದ್ದಾಳೆ ಅಂತ ಊಹಿಸಿದೆ. ನನ್ನದು ಎನನ್ನೂ ಕೆದಕಿ ಕೇಳುವ ಸ್ವಭಾವವಲ್ಲವಾದ್ದರಿಂದ ನಾನಂದೆ "ನೀನು ನಿನ್ನ ಮಗಳನ್ನು ಮಿಸ್ ಮಾಡ್ತಾ ಇದ್ದೀಯ" ಅಂತ. ಅದಕ್ಕವಳಂದಳು. "ಅದು ಹೌದು. ಆದರೆ ನಾನು ಯೋಚನೆ ಮಾಡ್ತಾ ಇದ್ದೆ ನೋಡು. ನೀನು ಭಾರತೀಯಳು. ನೀನು ಈಗ ಬ್ರಿಟನ್ ನಲ್ಲಿದ್ದಿ. ನಿನ್ನ ಪೇರೆಂಟ್ಸ್ ನಿನ್ನನ್ನು ಎಷ್ಟು ಮಿಸ್ ಮಾಡ್ತಾರೋ ಏನೋ? ನನ್ನ ಮಗಳು ಬ್ರಿಟಿಷ್. ಆದ್ರೆ ಅವಳು ಈಗ ಭಾರತದಲ್ಲಿ ಸೆಟಲ್ ಆಗಿದ್ದಾಳೆ. ನನ್ನ ಸೊಸೆ ಕೂಡಾ ಭಾರತೀಯಳು. ಆದ್ರೆ ಅವಳಿಲ್ಲಿ ಸೆಟಲ್ ಆಗಿದ್ದಾಳೆ. ಅದಕ್ಕೆ ನಾನು ಹೇಳಿದ್ದು ಎಲ್ಲರೂ ಎಲ್ಲಿರಬೇಕೋ ಅಲ್ಲಿಲ್ಲ. ತಪ್ಪುಜಾಗಗಳಲ್ಲಿದ್ದಾರೆ." ನನಗೋ ಗೋಜಲು ಗೋಜಲೆನಿಸಿತು. ನಾನು ಹಾಗೆಯೇ. ನನಗೆ ಸರಳ ಸುಲಭ ವಿಷಯಗಳೆಂದರೆ ಹಿತ. ಎಲ್ಲಿ ಸಂಕೀರ್ಣಗೊಳ್ಳುವುದೋ ಅಲ್ಲಿಗೆ ನಾನದನ್ನು ಬಿಟ್ಟುಬಿಡುತ್ತೇನೆ. ತುಂಬಾ ತಲೆಕೆಡಿಸಲು ಹೋಗುವುದಿಲ್ಲ. ಈ ಮಾತು ನನ್ನ ಕೆಲಸದ(ಸಂಶೋಧನೆ) ವಿಷಯದಲ್ಲಂತೂ ಸುಳ್ಳು. ಅಲ್ಲಿ ಕ್ಲಿಷ್ಟ ವಿಷಯ ಎಂದ್ರೆ ನನಗೆ ಪ್ರೀತಿ. ಆ ಸಮಸ್ಯೆಗಳನ್ನು ಬಿಡಿಸುವ ತನಕ ನನಗೆ ನೆಮ್ಮದಿಯಿರುವುದಿಲ್ಲ. ಆದರೆ ಈ ಉತ್ತರವಿಲ್ಲದ ಪ್ರಶ್ನೆಗಳೆಂದರೆ ನನಗೆ ಅಲರ್ಜಿ. ನಾನು ತಣ್ಣಗೆ ನಕ್ಕು "ಕ್ರಿಸ್ಟೀನ್, ಈಗ ವಿಶ್ವ ಚಿಕ್ಕದಾಗಿದೆಯಲ್ಲ." ಅಂದೆ. ಅವಳು ಮುಗುಳ್ನಕ್ಕು "ಹೂಂ. ಹಣವಿದ್ದವರಿಗೆ ಮಾತ್ರ" ಅಂದ್ಳು.
ಹೊರಬಂದು ಲ್ಯಾಬ್ ಕಡೆ ಬರಬೇಕಾದ್ರೆ ಮನಸ್ಸು ಚಿಂತನೆಗೆ ತೊಡಗಿತ್ತು. ನಿಜವಾಗಲೂ ನಾವೆಲ್ಲ ತಪ್ಪುಸ್ಥಳಗಳಲ್ಲಿದ್ದೇವಾ? ನಾನು, ಕ್ರಿಸ್ಟೀನ್ ಸೊಸೆ ಭಾರತೀಯರಾದ್ದರಿಂದ ಭಾರತದಲ್ಲಿರಬೇಕಿತ್ತಾ? ಕ್ರಿಸೀನ್ ಮಗ್ಳು ಇಲ್ಲಿರಬೇಕಿತ್ತಾ? ತಪ್ಪು ಹೌದಾದ್ರೆ ಯಾಕೆ ಹೀಗಾಯ್ತು? ಆ ಯೋಚನೆ ಕೂಡಾ ಬೇಡವೆನ್ನಿಸಿತು. ಮೇಜಿನ ಮೇಲಿದ್ದ ಇನ್ನೂ ಬಿಡಿಸಿರದ NMR spectra ಕಣ್ಣಿಗೆ ಬಿತ್ತು. ಈ ಪ್ರಶ್ನೆಗಳಲ್ಲದ ಪ್ರಶ್ನೆಗಳೊಂದಿಗೆ ಗುದ್ದಾಡಿ ತಲೆನೋವು ಬರಿಸಿಕೊಳ್ಳೋ ಬದ್ಲು ಇದನ್ನು ಬಿಡಿಸಿದ್ರೆ ನಾನು ಮಾಡಿರೋ ಕಂಪೌಂಡ್ ಯಾವುದು ಅಂತಾದ್ರೂ ಗೊತ್ತಾಗುತ್ತಲ್ಲ ಅಂತ ಖುಶಿಯಿಂದ ಹತ್ತಿರಕ್ಕೆಳೆದುಕೊಂಡೆ.

No comments: