ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ...
ಕುವೆಂಪು ಕವನ ನೆನಪಾಯಿತು.
ಬೀಸುಗಾಳಿಯೇನೂ ಇರಲಿಲ್ಲ. ಅಂತೆಯೇ ದೊಡ್ಡ ತೆರೆಗಳೂ ಇರಲಿಲ್ಲ. ನದಿ ಏಂದಿನಂತೆ ಪ್ರಶಾಂತವಾಗಿ ಹರಿಯುತ್ತಿತ್ತು. ನದಿಯ ಹರಿವಿನೊಂದಿಗೆ ದೋಣಿ ಸಾಗುತ್ತಾ ನಾಡು ದೂರಾಯಿತು. ಕಾಡು ಹತ್ತಿರವಾಯಿತು. ಅಂತೆಯೇ ಪ್ರಕೃತಿಯೊಂದಿಗಿನ ನಮ್ಮ ಮುಖಾಮುಖಿ!
ಸೂರ್ಯ ನದಿಯ ಪಥದ ಇಕ್ಕಡೆಗಳಲ್ಲೂ ಹುಲುಸಾಗಿ ಬೆಳೆದಿದ್ದ ಗಿಡಮರಗಳ ಮಧ್ಯೆ ಕಣ್ಣುಮುಚ್ಹಾಲೆಯಾಡುತ್ತಿದ್ದರೆ, ಉದ್ದಕ್ಕೆ ಮರಗಳಿಂದ ಇಳಿದುಬಿದ್ದ ಬಳ್ಳಿಗಳು ಗಾಳಿಗೆ ಬಳುಕುತ್ತಾ ತೊನೆದಾಡಿ ಸ್ವಾಗತ ಕೋರುತ್ತಿದ್ದವು. ಎಲೆಗಳೆಡೆಯಿಂದ ತೂರಿ ಬಂದ ಹೊಂಬಿಸಿಲ ಕೋಲುಗಳು ಜಲದಲೆಗಳೊಂದಿಗೆ ಮಿಲನ ಹೊಂದಿ ಅಲ್ಲಲ್ಲಿ ಬೆಳಕಿನ ಚಿತ್ತಾರ ಬಿಡಿಸಿತ್ತು. ಮೀನುಗಳೂ ಅಲ್ಲೊಮ್ಮೆ ಇಲ್ಲೊಮ್ಮೆ ಮಿಂಚಿ ಮರೆಯಾಗುತ್ತಾ ಚಿನ್ನಾಟ ನಡೆಸಿದ್ದವು. ನೀರಿನ ಮೇಲಿಂದ ಹಾದು ಬಂದ ತಂಗಾಳಿ ಮೈಮನಗಳಿಗೆ ಮುದ ನೀಡುತ್ತಿತ್ತು. ಹಕ್ಕಿಗಳ ಕಲರವ, ನದಿಯ ಜುಳುಜುಳು ಇವೆರಡೇ ಸದ್ದು! ಸಮಯವೇ ಸ್ತಬ್ಧವಾದಂತೆನಿಸಿತು.
ಆ ಕ್ಷಣಗಳೇ ಮಧುರ! ಒಂದೆರಡು ಹಂಸಗಳು ದೋಣಿಯ ಜೊತೆಯಲ್ಲಿ ತೇಲಿಬರುತ್ತಾ ನಮ್ಮೊಂದಿಗೆ ಪೈಪೋಟಿ ನಡೆಸುತ್ತಿದ್ದವು. ಹೀಗಿತ್ತು ನಮ್ಮ ಮೊದಲ ದೋಣಿಯಾನ! ನದಿ ದಡದಲ್ಲಿಯೇ ಪುಟ್ಟ ಮನೆಯೊಂದಿದ್ದರೆ.. ಎಂಬ ಹಂಬಲ ಎದೆ ತುಂಬಿದ್ದಂತೂ ನಿಜ!
ನಮ್ಮ ಯಾನ ಹೀಗೆ ಸಾಗುತ್ತಾ, ಹಲಕೆಲವು ಸೇತುವೆಗಳ ಕೆಳಗಿಂದ, ಮನೆಗಳ ನಡುವಿಂದ ಹೊರಬಂದು ಮುಂದುವರೆಯಿತು.
ದೂರದ ಚರ್ಚಿನ ಗೋಪುರದ ಮೇಲೆ ಹಾರಾಡುತ್ತಿರುವ ಬಾವುಟ ನಮ್ಮನ್ನು ಮತ್ತೆ ಈ ಲೋಕಕ್ಕೆ ಮರಳಿಸಿತು.
ನಾಡು ಮತ್ತೆ ಹತ್ತಿರವಾಯಿತು. ಕಾಡು ದೂರಾಯಿತು.
ಕಣ್ತುಂಬುವಷ್ಟು ಹಸಿರ ಝರಿ, ಕಿವಿ ತುಂಬುವಷ್ಟು ಹಕ್ಕಿಗಳಿಂಚರ, ರೀಲು ತುಂಬುವಷ್ಟು ಚಿತ್ರಗಳು, ಮನಸ್ಸಿನ ತುಂಬಾ ಕಳೆದ ಮಧುರ ಕ್ಷಣಗಳ ನೆನಪುಗಳನ್ನು ತುಂಬಿಕೊಂಡು ದೋಣಿಯಿಂದಿಳಿದು ನದಿಗುಂಟ ಮನೆಕಡೆ ನಡೆಯುತ್ತಿರಬೇಕಾದರೆ ಹಂಸವೊಂದು ನಾ ನಿನ್ನ ಬಿಡಲಾರೆ ಎಂದು ಜತೆಯಲೇ ತೇಲಿ ಬಂತು.
2 comments:
good to see you blogging!! 2008 me kuch nahin? waiting to read some more from u!!
ಪ್ರೀತಿಯ ಅಂತರ್ಜಾಲ ಸ್ನೇಹಿತರೆ,
ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.
ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.
http://saadhaara.com/events/index/english
http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.
ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.
ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.
-ಕನ್ನಡಸಾಹಿತ್ಯ.ಕಾಂ ಬಳಗ
Post a Comment